‘ಅಮರಾವತಿ’ ಆಂಧ್ರ ಪ್ರದೇಶದ ರಾಜಧಾನಿ: ಚಂದ್ರಬಾಬು ನಾಯ್ಡು ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಳೆ (ಜೂನ್‌ 12) ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಅಮರಾವತಿಯನ್ನು ಆಂಧ್ರ ಪ್ರದೇಶದ ರಾಜಧಾನಿಯನ್ನಾಗಿ ಘೋಷಿಸಿದರು.

ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ(JSP)ಯ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಚಂದ್ರಬಾಬು ನಾಯ್ಡು ಅವರು,ಅಮರಾವತಿ ಆಂಧ್ರ ಪ್ರದೇಶದ ರಾಜಧಾನಿಯಾಗಲಿದೆ. ನಾವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕೆಲವು ಭಾಗಗಳನ್ನು ಮಾತ್ರವಲ್ಲ ಇಡೀ ರಾಜ್ಯದ ಏಳಿಗೆಗೆ ಕೊಡುಗೆ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಜಗನ್‌ ಮೋಹನ್‌ ರೆಡ್ಡಿ ಅವರು ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ, ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ವಿಕೇಂದ್ರೀಕೃತ ಅಭಿವೃದ್ಧಿಯ ಕಲ್ಪನೆಯನ್ನು ಹುಟ್ಟು ಹಾಕಿದ್ದರು.

ಸರ್ಕಾರದ ಧ್ಯೇಯವಾಕ್ಯ ‘ರಾಜ್ಯ ಮೊದಲು’ . ನಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿದಿಲ್ಲ. ನಮ್ಮ ರಾಜ್ಯದ ಸಾಲ ಏನು, ಹಣವನ್ನು ಎಲ್ಲಿಂದ ಎರವಲು ಪಡೆಯಲಾಗಿದೆ ಮತ್ತು ಯಾವುದನ್ನು ಅಡಮಾನ ಇಡಲಾಗಿದೆ ಎಂಬುದೂ ತಿಳಿದಿಲ್ಲ. ಆದರೆ ನಾವು ‘ರಾಜ್ಯ ಮೊದಲು’ ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದೇವೆ ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!