ಚಿತ್ರದುರ್ಗದಲ್ಲಿ ನಡೆಯಿತು ರೇಣುಕಾಸ್ವಾಮಿ ಅಂತ್ಯಕ್ರಿಯೆ: ನಾಳೆ ಬೃಹತ್ ಪ್ರತಿಭಟನೆಗೆ ಕರೆ

ಹೊಸದಿಗಂತ ವರದಿ,ಚಿತ್ರದುರ್ಗ:

ಬೆಂಗಳೂರಿನಲ್ಲಿ ಕೊಲೆಗೀಡಾದ ರೇಣುಕಾಸ್ವಾಮಿ ಮೃತದೇಹವನ್ನು ಮಂಗಳವಾರ ರಾತ್ರಿ ಚಿತ್ರದುರ್ಗಕ್ಕೆ ತರಲಾಯಿತು. ನಗರದ ತುರುವನೂರು ರಸ್ತೆಯ ವಿಆರ್‌ಎಸ್ ಬಡಾವಣೆಯ ನಿವಾಸಕ್ಕೆ ಮೃತದೇಹ ತಂದಾಗ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಮನೆಯ ಬಳಿ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದ್ದರು.

ಮೃತ ರೇಣುಕಾಸ್ವಾಮಿ ತಾನೂ ಸಹ ನಟ ದರ್ಶನ್ ಅವರ ಅಭಿಮಾನಿಯಾಗಿದ್ದರು. ನಟ ದರ್ಶನ್ ಹಾಗೂ ಆತನ ಗೆಳತಿ ಪವಿತ್ರಾಗೌಡ ಅವರ ಗೆಳತನ ಕುರಿತು ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಹಾಗಾಗಿ ಪವಿತ್ರಾಗೌಡ ಅವರ ಮೊಬೈಲ್‌ಗೆ ಮೆಸೇಜ್ ಮಾಡಿ ನಮ್ಮ ಡಿ-ಬಾಸ್ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರ ಸಂಸಾರಕ್ಕೆ ಮತ್ತೆ ತೊಂದರೆ ಕೊಡದಂತೆ ಎಚ್ಚರಿಸಿದ್ದ ಎಂದು ಮೃತ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ನಟ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗದ ಅಧ್ಯಕ್ಷ ರಘು ದರ್ಶನ್ ಅಲಿಯಾಸ್ ರಾಘವೇಂದ್ರ ಹಾಗೂ ಇತರೆ ಒಂದಿಬ್ಬರು ಸೇರಿ ಜೂನ್ ೮ ರಂದು ಶನಿವಾರ ರೇಣುಕಾಸ್ವಾಮಿಯನ್ನು ಅಪಹರಿಸಿದ್ದರು. ಬಳಿಕ ವಾಹನವೊಂದರಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದರು. ಇದಾದ ಬಳಿಕ ಬೆಂಗಳೂರಿನಲ್ಲಿ ಕೊಲೆಯಾಗಿರುವ ಕುರಿತು ಮಾಧ್ಯಮಗಳಿಂದ ತಿಳಿದುಬಂದಿದೆ.

ಚಿತ್ರದುರ್ಗದ ಅಪೋಲೋ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಎಂದಿನಂತೆ ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದರು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ತಾನು ಊಟಕ್ಕೆ ಬರುವುದು ತಡವಾಗುತ್ತದೆ. ಕಾಯುವುದು ಬೇಡ ಎಂದು ಫೋನ್ ಮಾಡಿ ಮನೆಯವರಿಗೆ ತಿಳಿಸಿದ್ದರು. ಆದರೆ ಶನಿವಾರ ತಡರಾತ್ರಿಯಾದರೂ ಮನೆಗೆ ಬರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರಿಗೆ ಆತನ ಕೊಲೆಯ ಸುದ್ದಿ ತಿಳಿದು ಆಘಾತ ಉಂಟಾಗಿದೆ.

ಮೃತನ ತಂದೆ ಕಾಶಿನಾಥ ಶಿವನಗೌಡ ಬೆಸ್ಕಾಂ ನಿವೃತ್ತ ನೌಕರ, ತಾಯಿ ರತ್ನಪ್ರಭಾ ಗೃಹಿಣಿ. ತಂಗಿ ಸುಚಿತ್ರ ಅವರನ್ನು ಮದುವೆ ಮಾಡಿ ಕೊಡಲಾಗಿದೆ. ರೇಣುಕಾಸ್ವಾಮಿಗೆ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಈಗ ಆತನ ಪತ್ನಿ ಸಹನ ನಾಲ್ಕು ತಿಂಗಳ ಗರ್ಭಿಣಿ. ಜೀವನದ ಕೊನೆ ದಿನಗಳಲ್ಲಿ ತಂದೆ, ತಾಯಿಗೆ ಆಸರೆಯಾಗಬೇಕಿದ್ದ ಮಗ ಸಾವಿನ ಮನೆ ಸೇರಿದ್ದಾನೆ. ಪತಿಯ ಅನಿರೀಕ್ಷಿತ ಸಾವಿನಿಂದ ಗರ್ಭಿಣಿ ಪತ್ನಿಗೆ ದಿಕ್ಕೇ ತೋಚದಂತಾಗಿದೆ. ಮುಂದಿನ ಜೀವನದ ಕುರಿತು ಇಟ್ಟುಕೊಂಡಿದ್ದ ಕನಸುಗಳು ಕಮರಿ ಹೋದಂತಾಗಿದೆ.

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಮೃತನ ಅಂತ್ಯಕ್ರಿಯೆ ನಡೆಸಲಾಯಿತು. ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ವೀರಶೈವ ಸಮಾಜದ ಮುಖಂಡರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!