ಗ್ಯಾರೆಂಟಿಗಳು ನಮಗೆ ಮತ ತಂದು ಕೊಟ್ಟಿಲ್ಲ ಎಂದವರು ನಾನಲ್ಲ, ನಿಮ್ಮ ಕಾಂಗ್ರೆಸ್ ಶಾಸಕರು: ಸಿಎಂ ಗೆ ಅಶೋಕ್ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟು? ಎಂದು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಅವರ ತಿರುಗೇಟು ನೀಡಿದ್ದು, ಇದು ನಮ್ಮ ಮಾತಲ್ಲ, ನಿಮ್ಮ ಕಾಂಗ್ರೆಸ್ ಸಚಿವರು ಶಾಸಕರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್. ಅಶೋಕ್ ಅವರು, ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಪರೂಪಕ್ಕೆ ಒಮ್ಮೊಮ್ಮೆ ತಮ್ಮ ಪ್ರಗಾಢ ನಿದ್ದೆಯಿಂದ ಎದ್ದು ತಮ್ಮ ಅಹಂಕಾರ, ದರ್ಪ ಪ್ರದರ್ಶನ ಮಾಡುತ್ತಿರುತ್ತಾರೆ. ಗ್ಯಾರೆಂಟಿಗಳು ಸೋತಿದೆ, ಗ್ಯಾರೆಂಟಿಗಳು ನಮಗೆ ಮತ ತಂದು ಕೊಟ್ಟಿಲ್ಲ, ಗ್ಯಾರೆಂಟಿಗಳ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳುತ್ತಿರುವುದು ನಾನಲ್ಲ ಸಿದ್ದರಾಮಯ್ಯನವರೇ, ನಿಮ್ಮ ಸಚಿವರುಗಳು, ಶಾಸಕರುಗಳೇ ಗ್ಯಾರೆಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.

ಇಡೀ ದೇಶದಲ್ಲಿ 40 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸುಳ್ಳು, ಅಪಪ್ರಚಾರ ಮಾಡಿದರೂ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಪಡೆದಷ್ಟು ಸೀಟುಗಳನ್ನೂ I.N.D.I.A. ಮೈತ್ರಿಕೂಟ ಪಡೆಯಲಾಗಲಿಲ್ಲ. ರಾಹುಲ್ ಗಾಂಧಿ ಅವರನ್ನು ಎಷ್ಟು ಬಾರಿ ರೀಲಾಂಚ್ ಮಾಡಿದರೂ ಕಾಂಗ್ರೆಸ್ ತಕ್ಕಡಿ ಎರಡಂಕಿ ದಾಟಲಿಲ್ಲ. ಈಗ ಹೇಳಿ ಸೋತಿದ್ದು ಯಾರು ಗೆದಿದ್ದು ಯಾರು?

ಇನ್ನು ರಾಜ್ಯದ ವಿಚಾರಕ್ಕೆ ಬರೋಣ. ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಸಿಕ್ಕಿದೆ. 17 ಸಂಪುಟ ಸಚಿವರ ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸಲು ವಿಫಲರಾಗಿದ್ದಾರೆ. ಸಚಿವರ ಮಕ್ಕಳು, ತಮ್ಮಂದಿರು, ಕುಟುಂಬ ಸದಸ್ಯರು ಸೋತಿದ್ದಾರೆ. ಈಗ ಹೇಳಿ ಸೋತಿದ್ದು ಯಾರು, ಗೆದ್ದಿದ್ದು ಯಾರು?

ಕಾಂಗ್ರೆಸ್ ಪಕ್ಷ ಗೆದ್ದರೆ ಇವಿಎಂ ಸರಿಯಿದೆ. ಕಾಂಗ್ರೆಸ್ ಪಕ್ಷ ಸೋತರೆ ಇವಿಎಂ ಸರಿಯಿಲ್ಲ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕಾರಣ. ಶತಾಯ ಗತಾಯ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ನೀವು ನೀಡಿದ ಸುಳ್ಳು ಭರವಸೆಗಳಿಂದ ದೇಶಾದ್ಯಂತ ಹೆಣ್ಣುಮಕ್ಕಳ ನಿಮ್ಮ ಪಕ್ಷಕ್ಕೆ ಹೇಗೆ ಶಾಪ ಹಾಕುತ್ತಿದ್ದಾರೆ ಎಂದು ಇಡೀ ದೇಶವೇ ನೋಡುತ್ತಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೋಗಿದ್ದು ಮೋದಿ ಅವರನ್ನು ಸೋಲಿಸಲು. ಎನ್ ಡಿಎ ಚುನಾವಣೆಗೆ ಹೋಗಿದ್ದು ದೇಶವನ್ನ ಗೆಲ್ಲಿಸಲು. ಆದ್ದರಿಂದ ದೇಶ ಗೆದ್ದಿದೆ, I.N.D.I.A. ಸೋತಿದೆ. ಗ್ಯಾರೆಂಟಿಗಳ ಬಗ್ಗೆ ಬೇಸರ, ಸಿಟ್ಟು, ಅನುಮಾನ ಇವೆಲ್ಲಾ ಇರುವುದು ನಮಗಲ್ಲ, ನಿಮ್ಮ ಸಚಿವರಿಗೆ ಮತ್ತು ನಿಮ್ಮ ಕಾಂಗ್ರೆಸ್ ಶಾಸಕರಿಗೆ’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!