ದಿಗಂತ ವರದಿ ಬೆಳಗಾವಿ:
ಇಲ್ಲಿನ ನ್ಯಾಯಾಲಯ ಆವರಣದಲ್ಲಿಯೇ ಪಾಕಿಸ್ತಾನ ಪರ ಘೋಷಣೆಗೆ ಕೂಗಿದ ವಿಚಾರಣಾಧೀನ ಕೈದಿಯೊಬ್ಬನಿಗೆ ವಕೀಲರು, ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿ ಜಯೇಶ್ ಪೂಜಾರಿ ಎಂಬಾತನೇ ಪಾಕಿಸ್ತಾನ ಪರ ಘೋಷಣೆ ಕೂಗಿ ಧರ್ಮದೇಟು ತಿಂದಿದ್ದಾನೆ. ಮಂಗಳೂರು ಮೂಲದ ಜಯೇಶ್ ಪೊಜಾರಿಯನ್ನು ವಿಚಾರಣೆಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಸ್ಥಳೀಯ ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ನನ್ನ ಅಹವಾಲು ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶಗೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ.
ಇದರಿಂದ ಕುಪಿತಗೊಂಡ ವಕೀಲರು ಮತ್ತು ಜನರು ಹೊಡೆಯಲು ಆರಂಭಿಸಿದ್ದಾರೆ. ಆರೋಪಿಯನ್ನು ಕರೆ ತಂದಿದ್ದ ಪೊಲೀಸರು ಪೂಜಾರಿಯನ್ನು ರಕ್ಷಿಸಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದಿದ್ದಾರೆ.
ಜಯೇಶ್ ಪೂಜಾರಿ ಈ ಹಿಂದೆ ಜೈಲಿನಲ್ಲಿಬದ್ದುಕೊಂಡೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಕರೆ ಹಾಕಿದ್ದನ್ನು ಸ್ಮರಿಸಬಹುದು. ಕೇಂದ್ರ ಸಚಿವ ನಿತೀನ್ ಗಡ್ಕರಿಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಆರೋಪಿಯನ್ನು ನ್ಯಾಯಾಲಯಕ್ಕೆ ಇಂದು ಕರೆತರಲಾಗಿತ್ತು.