Monday, January 12, 2026

CYBER | ಎಐ ಹುಡುಗಿಯನ್ನು ನಂಬಿ ಬೆತ್ತಲಾದ ಯವಕ, ಲಕ್ಷಾಂತರ ರೂಪಾಯಿಗೆ ಬ್ಲ್ಯಾಕ್‌ಮೇಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

AI ಬಳಸಿ ಸೈಬರ್‌ ವಂಚಕರು ಯುವಕನೊಬ್ಬನನ್ನು ಯಾಮಾರಿಸಿ 1.5 ಲಕ್ಷ ರೂಪಾಯಿ ಎಗರಿಸಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, AI ಯುವತಿಯನ್ನು ನಂಬಿ ಯುವಕನೊಬ್ಬ ಆಕೆಯ ಮುಂದೆ ಬೆತ್ತಲೆಯಾಗಿ ನಂತರ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ 1.5 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ಸಂಬಂಧ 26 ವರ್ಷದ ಯುವಕ ಬೆಂಗಳೂರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ ಕಿಡಿಗೇಡಿಗಳು, ಯುವಕನಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್ ಮಾಡಿ ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಈಜಿಪುರದಲ್ಲಿ ವಾಸವಾಗಿರುವ ಯುವಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಜ.5 ರಂದು ಡೇಟಿಂಗ್ ಆ್ಯಪ್‌ನಲ್ಲಿ ಪ್ರೊಫೈಲ್ ರಚಿಸಿದ ತಕ್ಷಣ ಇಶಾನಿ ಎಂಬ ಯುವತಿಯಿಂದ ರಿಕ್ವೆಸ್ಟ್ ಬಂದಿದೆ.

ಬಳಿಕ ಪರಿಚಯ ಮಾಡಿಕೊಂಡು ಇಬ್ಬರು ಕೂಡ ಏಕಾಂತವಾಗಿ ಮಾತನಾಡಲು ಶುರು ಮಾಡಿದ್ದರು. ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದರು. ನಂತರ ಇಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಮಾತನಾಡಿದ್ದರು. ಕೆಲ ದಿನಗಳ ಹಿಂದೆ ಯುವಕನಿಗೆ ಯುವತಿಯಿಂದ ವಿಡಿಯೋ ಕಾಲ್ ಬಂದಿದೆ. ಬಟ್ಟೆಯನ್ನು ಬಿಚ್ಚಿ, ಆತನ ಮುಂದೆ ಬೆತ್ತಲೆಯಾಗಿದ್ದಾಳೆ. ನೀನೂ ಬಟ್ಟೆ ಬಿಚ್ಚು ಎಂದು ಹೇಳಿ, ಅವನನ್ನು ಬೆತ್ತಲೆ ಮಾಡಿದ್ದಳು.

ಈ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದ ಕಿಡಿಗೇಡಿ, ಖಾಸಗಿ ಚಿತ್ರಗಳನ್ನು ವಾಟ್ಸ್ಯಾಪ್ ಮಾಡಿ, ಈ ವಿಡಿಯೋ ನಿನ್ನ ಸ್ನೇಹಿತರು, ಕುಟುಂಬಕ್ಕೆ ಕಳುಹಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುವೆ ಎಂದು ಹೇಳಿದ್ದಾನೆ. ಅದರಿಂದ ಭಯಗೊಂಡ ಯುವಕ ಮೊದಲು 60 ಸಾವಿರ ರೂ. ಹಾಗೂ ನಂತರ 93 ಸಾವಿರ ರೂ.ಗಳನ್ನು ಅವರು ನೀಡಿದ್ದ ಖಾತೆಗೆ ಕಳುಹಿಸಿದ್ದಾನೆ. ಆದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಕೂಡಲೇ ಸೆನ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಎಐ ಮೂಲಕ ಯುವತಿಯ ಪ್ರೊಫೈಲ್ ಸೃಷ್ಟಿಸಿದ್ದು, ಎಐ ಯುವತಿಯೇ ಬೆತ್ತಲೆಯಾಗಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!