ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರೊಬ್ಬರು ಯುವತಿಯೊಬ್ಬಳಿಗೆ ಸರಿಯಾದ ಬಟ್ಟೆ ಹಾಕೊಳ್ಳಿ ಎಂದು ಹೇಳಿದಕ್ಕೆ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾಳೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಗೂ ಈ ಯುವತಿಯನ್ನು ಬಂಧಿಸಿದ್ದಾರೆ.
ಮಹದೇವಪುರದ ನಾರಾಯಣಪುರ ನಿವಾಸಿ ದಾಮಿನಿ ಅಲಿಯಾಸ್ ಮೋಹಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ 20 ವಯಸ್ಸಿನ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.
ಶುಕ್ರವಾರ ಸಂಜೆ ಕೆ.ಆರ್. ಪುರಂ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ದಾಮಿನಿಯ ಉಡುಪಿನ ಬಗ್ಗೆ ಕೆಲವು ದುಷ್ಕರ್ಮಿಗಳು ಅಶ್ಲೀಲವಾಗಿ ಮಾತನಾಡಿದ್ದರು. ಈ ವೇಳೆ ಮಧ್ಯೆ ಬಂದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ದುಷ್ಕರ್ಮಿಗಳನ್ನು ಅಲ್ಲಿಂದ ಓಡಿಸಿದ್ದಾರೆ. ನಂತರ ಆ ಹುಡುಗಿಗೆ ಬಟ್ಟೆಯ ಬಗ್ಗೆ ಸಲಹೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿರೋ ಬಟ್ಟೆ ಧರಿಸಿ, ಈ ಪ್ರದೇಶದಲ್ಲಿ ಹೆಚ್ಚು ಜನ ಓಡಾಡುತ್ತಾರೆ. ಇಂತಹ ವ್ಯಕ್ತಿಗಳು ಕಾಯುತ್ತಿರುತ್ತಾರೆ ಹುಡುಗಿಯರು ಎಲ್ಲಿ ಸಿಗುತ್ತಾರೆ ಎಂದು, ತುಂಬಾ ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಹುಡುಗಿ, ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಲ್ಲೆಯಿಂದ ನರಸಮ್ಮ ಅವರ ಮುಖ ಮತ್ತು ಮೂಗಿಯಿಂದ ರಕ್ತ ಬಂದಿದೆ. ಸ್ವಲ್ಪ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಾಮಿನಿಯನ್ನು ವಶಕ್ಕೆ ಪಡೆದಿದ್ದಾರೆ. ನರಸಮ್ಮ ಅವರ ದೂರಿನ ಆಧಾರದ ಮೇಲೆ, ದಾಮಿನಿಯನ್ನು ಬಂಧಿಸಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಹೇಳಿದೆ. ದಾಮಿನಿ ಮಾಲ್ಡೀವ್ಸ್‌ನಲ್ಲಿ ಶಾಲೆಯಲ್ಲಿ ಓದಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿಬಿಎಂ ಪದವಿ ಪಡೆದಿದ್ದಾಳೆ ಎಂದು ಪೊಲೀಸರ ಹೇಳಿಕೆಯಲ್ಲಿ ಹೇಳಲಾಗಿದೆ.

