ದರ್ಶನ್ ಆಂಡ್ ಗ್ಯಾಂಗ್ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್‌ ಸೇರಿ ಇತರ ಆರೋಪಿಗಳನ್ನು ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲು ಆದೇಶ ನೀಡಿದರು.

ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಕೇಸ್‌ನ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಮತ್ತೊಂದೆಡೆ ಪೊಲೀಸರು ಸ್ಥಳ ಮಹಜರು, ಸಾಕ್ಷ್ಯಗಳ ಕುರಿತ ವರದಿಯನ್ನು ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿದರು.

ಈ ವೇಳೆ ದರ್ಶನ್‌ ಪರ ವಕೀಲ ಅನಿಲ್ ಬಾಬು ವಾದ ಮಂಡಿಸಿ, ಆರೋಪಿಗಳಿಗೆ ವಿಚಾರಣೆ ವೇಳೆ ಹಿಂಸೆ ಕೊಟ್ಟಿದ್ದಾರೆ. ಮಹಿಳಾ ಆರೋಪಿ ಪವಿತ್ರಾ ಗೌಡಳನ್ನೂ 6 ದಿನ ವಿಚಾರಣೆ ನಡೆಸಲಾಗಿದೆ. ಎಲ್ಲದಕ್ಕೂ ದರ್ಶನ್‌ ಕಾರಣ ಎಂದರೆ ಹೇಗೆ? ವಿಚಾರಣೆ ಹಂತದಲ್ಲಿದ್ದಾಗಲೇ ದರ್ಶನ್‌ ಮೇಲೆ ಎಲ್ಲಾ ಅರೋಪಗಳನ್ನು ಮಾಡುವುದು ಎಷ್ಟು ಸರಿ? ಪವಿತ್ರಾ ಗೌಡ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆರೋಪಿಗಳ ಹೇಳಿಕೆಗಳೂ ಸೋರಿಕೆಯಾಗುತ್ತಿವೆ. ಹೀಗಾಗಿ ಮತ್ತೆ ಕಸ್ಟಡಿಗೆ ನೀಡುವುದು ಬೇಡ ಹೇಳಿದರು.

ಮತ್ತೊಂದೆಡೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮುಂದುವರಿಸಿ‌, ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಹಿಂಸೆ ನೀಡಲಾಗಿದೆ. ಆರೋಪಿಗಳು ಯಾವೆಲ್ಲಾ ಡಿವೈಸ್‌ ಬಳಸಿದ್ದಾರೋ, ಅವುಗಳನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಸಮಯಾವಕಾಶ ಬೇಕು. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಪವಿತ್ರಾ ಗೌಡ ಪರ ವಕೀಲ ನಾರಾಯಾಣಸ್ವಾಮಿ ವಾದ ಮಂಡಿಸಿ, ನನ್ನ ಕಕ್ಷಿದಾರರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ವಾದ-ಪ್ರತಿವಾದ ಅಲಿಸಿದ ಬಳಿಕ ನ್ಯಾಯಾಧೀಶರು, ಆರೋಪಿಗಳನ್ನು ಜೂನ್‌ 20ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲು ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!