ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಬಸ್ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ ಮತ್ತು ಅಮರನಾಥ ಯಾತ್ರೆಯ ಸಿದ್ಧತೆಗಳ ಬಗ್ಗೆ ಭಾನುವಾರ ಸಭೆ ನಡೆಸಿದ್ದರು. ಅಲ್ಲದೇ ರಿಯಾಸಿ ಜಿಲ್ಲೆಯಲ್ಲಿ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಇತರ ಕೆಲವು ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಸಭೆಯ ಬಳಿಕ ಈ ಬೆಳವಣಿಗೆ ನಡೆದಿದೆ.
ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಬಸ್ ಆಳವಾದ ಕಂದಕಕ್ಕೆ ಉರುಳಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು. ಘಟನೆಯಲ್ಲಿ 41 ಜನ ಗಾಯಗೊಂಡಿದ್ದರು. ಬಸ್‍ನಲ್ಲಿದ್ದ ಯಾತ್ರಾರ್ಥಿಗಳು ಶಿವ ಖೋರಿ ದೇವಸ್ಥಾನದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿತ್ತು.