ರಾಯ್‌ಬರೇಲಿಗೆ ಜೈ ಎಂದ ರಾಹುಲ್‌ ಗಾಂಧಿ: ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ರಾಹುಲ್‌ ಗಾಂಧಿ ಕೊನೆಗೂ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿದ್ದಾರೆ.

ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯನ್ನೇ ರಾಹುಲ್‌ ಗಾಂಧಿ ಉಳಿಸಿಕೊಂಡಿದ್ದಾರೆ. ಇನ್ನು, ರಾಹುಲ್‌ ಗಾಂಧಿಯಿಂದ ತೆರವಾಗುವ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಪ್ರಿಯಾಂಕಾ ವಾದ್ರಾ ಅವರು ವಯನಾಡಿನಿಂದ ಸ್ಪರ್ಧಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಯಾವ ಕ್ಷೇತ್ರದ ಸಂಸದರಾಗಿ ಮುಂದುವರಿಯಬೇಕು ಎಂಬ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಸಭೆಯ ಬಳಿಕ ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲಿದ್ದಾರೆ. ವಯನಾಡು ಲೋಕಸಭೆ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಪಕ್ಷವು ತೀರ್ಮಾನ ತೆಗೆದುಕೊಂಡಿದೆ ಎಂಬುದಾಗಿ ಖರ್ಗೆ ಮಾಹಿತಿ ನೀಡಿದರು.

ಸಭೆಯ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ,ನಾನು ವಯನಾಡಿನ ಜನತೆ ಜತೆ ಕಳೆದ ಐದು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ವರ್ಷಗಳಿಂದ ವಯನಾಡು ಸಂಸದನಾಗಿದ್ದ ನನಗೆ ಅಲ್ಲಿನ ಜನ ತೋರಿಸಿದ ಪ್ರೀತಿ, ಬೆಂಬಲ ಅಪಾರವಾದುದು. ಈಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ನಾನು ಕೂಡ ವಯನಾಡಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ ಎಂದು ಹೇಳಿದರು.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!