ಹೊಸದಿಗಂತ ಡಿಜಿಟಲ್ ಡೆಸ್ಕ್, ಮಂಗಳೂರು:
ಸಲೂನ್ ಉದ್ಯೋಗಿಯ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಪುತ್ತೂರಿನ ಚೈನಾ ಟೌನ್ ಬಿರಿಯಾನಿ ಪಾಯಿಂಟ್ ಬಳಿ ನಡೆದಿದೆ.
ಘಟನೆಯಲ್ಲಿ ಉಡುಪಿ ಜಿಲ್ಲೆ ಪುತ್ತೂರು ಗ್ರಾಮದ ನಿವಾಸಿ ಚರಣ್ (18) ಗಾಯಗೊಂಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.
ಸಲೂನಿನಲ್ಲಿ ಕೆಲಸವನ್ನು ಮಾಡಿಕೊಂಡಿದ್ದ ಸಂದರ್ಭ ಅಭಿ ಕಟಪಾಡಿ ಎಂಬಾತ ಕರೆಮಾಡಿ ಶಬರಿ ಎಂಬುವವನ ಬಗ್ಗೆ ಮಾತನಾಡಬೇಕಾಗಿದೆ, ಪುತ್ತೂರಿನ ಚೈನಾ ಟೌನ್ ಬಿರಿಯಾನಿ ಪಾಯಿಂಟ್ ಬಳಿ ಬಾ ಎಂದು ತಿಳಿಸಿದ್ದ. ಅದರಂತೆ ಸುಜನ್ ಎಂಬಾತನ ಬೈಕ್‌ನಲ್ಲಿ ತೆರಳಿದ್ದು, ಈ ವೇಳೆ ಸ್ನೇಹಿತರಾದ ನಾಗರಾಜ್, ಕಾರ್ತಿಕ್, ರಂಜು ಎಂಬುವವರು ಸ್ಕೂಟಿಯಲ್ಲಿ ಬಿರಿಯಾನಿ ಪಾಯಿಂಟ್‌ಗಿಂತ ಸ್ವಲ್ಪ ಮುಂದೆ ಗೂಡಂಗಡಿ ಬಳಿಗೆ ತೆರಳಿದ್ದರು.
ಈ ವೇಳೆ ನೋಡಿ ಪರಿಚಯವಿರುವ ಪ್ರವೀಣ, ಅಭಿ ಕಟಪಾಡಿ, ದೇಶರಾಜ್, ಶಬರಿ ಹಾಗೂ ಪರಿಚಯವಿಲ್ಲದ ಇತರ ಇಬ್ಬರು ರಿಕ್ಷಾವೊಂದಕ್ಕೆ ಒರಗಿಕೊಂಡು, ಕೈಯಲ್ಲಿ ತಲವಾರು ಹಿಡಿದು ನಿಂತಿದ್ದು, ನಮ್ಮನ್ನು ನೋಡಿ ತಲವಾರು ಬೀಸಿದ್ದಾರೆ. ಈ ವೇಳೆ ಬೈಕ್, ಸ್ಕೂಟಿ ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗುವ ವೇಳೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದಲ್ಲದೆ ಅಲ್ಲಿ ಬಿಟ್ಟುಹೋಗಿದ್ದ ಬೈಕ್ ಹಾಗೂ ಸ್ಕೂಟಿಗೆ ಹಾನಿ ಮಾಡಿದ್ದಾರೆ ಎಂದು ಚರಣ್ ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಶಬರಿ ಎಂಬವನಿಗೆ ಚರಣ್ ಬೈದ ಎಂಬ ಕಾರಣ ಮುಂದಿಟ್ಟುಕೊಂಡು, ಹಳೇ ದ್ವೇಷದಿಂದ ಈ ಕೃತ್ಯ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಯ ಕುಂಜಿಬೆಟ್ಟಿನಲ್ಲಿ ನಡೆದ ಗ್ಯಾಂಗ್‌ವಾರ್ ಬೆನ್ನಿಗೇ ಮತ್ತೊಂದು ಘಟನೆ ಮರುಕಳಿಸಿದ್ದು, ಪೊಲೀಸ್ ಇಲಾಖೆಗೆ ಈ ಬೆಳವಣಿಗೆಗಳು ಸವಾಲಾಗಿ ಕಾಡಿದೆ.