ದಿಗಂತ ವರದಿ ರಾಯಚೂರು :
ಈ ಆರೋಗ್ಯ ಕೇಂದ್ರದ ಪರ್ಮನೆಂಟ್ ವೈದ್ಯರು ಯಾರು, ಯಾವಾಗ ಬರ್ತಾರೋ ಹೋಗ್ತಾರೋ ಗೊತ್ತೇ ಇಲ್ಲ, ನಮ್ಮನ್ನು ಆರೈಕೆ ಮಾಡುತ್ತಿರುವವರು ವೈದ್ಯರೋ ಅಥವಾ ಮತ್ಯಾರೋ ಎಂಬುದು ಕೂಡ ತಿಳಿದಿಲ್ಲ..
ರಾಯಚೂರಿನ ಉಡುಮಗಲ್ ಖಾನಾಪುರ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಇದಾಗಿದೆ..
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಫರಹಾ ನಸ್ರೀನ್ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ, ಪೇಷೆಂಟ್ಸ್ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇನ್ನು ಇಲ್ಲಿನ ಸ್ಟಾಫ್ ನರ್ಸ್ ಜನರ ಪಾಲಿಗೆ ಡಾಕ್ಟರ್ ಆಗಿದ್ದು, ಬಹುತೇಕ ಚಿಕಿತ್ಸೆ ಅವರೇ ನೀಡುತ್ತಿದ್ದಾರೆ ಎನ್ನಲಾಗಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಡುಮಗಲ್, ಖಾನಾಪುರ, ಆಶಾಪುರ, ಕಾಲಿಬೆಂಚಿ, ಅರಳಿಬೆಂಚಿ, ನಾಗಲಾಪುರ, ದಿನ್ನಿ, ನೆಲಹಾಳ, ಮರ್ಚಟ್ಟಾಳ, ಮಮದಾಪೂರ, ಮಂಜರ್ಲಾ, ಅನವಾರ, ಗೋನವಾರ ಹಾಗೂ ಕಮಲಾಪೂರ ಸೇರಿ ಒಟ್ಟು 14 ಹಳ್ಳಿಗಳ ವ್ಯಾಪ್ತಿಯಲ್ಲಿನ ಜನತೆ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಚಿಕಿತ್ಸೆ ನೀಡುವುದಕ್ಕೆ ಎಂಬಿಬಿಎಸ್ ವೈದ್ಯರೇ ಪ್ರತಿ ನಿತ್ಯ ಬರುವುದಿಲ್ಲ.
ಅಪರೂಪಕ್ಕೊಮ್ಮೆ ವೈದ್ಯರು ಆಗಮಿಸಿ ಒಂದೆರಡು ಗಂಟೆ ಇದ್ದು ವಾಪಾಸಾಗುತ್ತಾರೆ. ನಿತ್ಯ ನೂರಾರು ಜನತೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ ಆದರೆ ಬಹುತೇಕರಿಗೆ ಹಿರಿಯ ವೈದ್ಯರಿಂದ ಚಿಕಿತ್ಸೆ ದೊರೆಯುವುದೇ ಇಲ್ಲ. ಇವರೆಲ್ಲ ಜಿಲ್ಲಾ ಕೇಂದ್ರ ರಾಯಚೂರಿಗೆ ಬರಬೇಕು ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸ್ಥಿತಿ ಇದೆ. ಇಲ್ಲಿಗೆ ಬರುವವರು ಬಡವರೇ ಆಗಿರುತ್ತಾರೆ. ಇಂತಹವರಿಗೆನೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದಿದ್ದರೆ ಈ ಆರೋಗ್ಯ ಕೇಂದ್ರ ಇದ್ದರೆಷ್ಟು ಇಲ್ಲದಿದ್ದರೆಷ್ಟು ಎನ್ನುವುದು ಇಲ್ಲಿನ ಜನತೆಯ ಆಕ್ರೋಶವಾಗಿದೆ.
ತಾಲೂಕಾ ವೈದ್ಯಾಧಿಕಾರಿ ಡಾ. ಪ್ರಜ್ವಲ್ ಅವರಿಗೆ ವೈದ್ಯರು ಗೈರು ಹಾಜರಿ ಬಗ್ಗೆ ಮಾಹಿತಿ ನೀಡಲಾಗಿದ್ದು, ವೈದ್ಯರು ಮೂರು ದಿನಗಳ ರಜೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ವೈದ್ಯರು ಕಳೆದ ಐದು ದಿನಗಳಿಂದ ಹಾಜರಾತಿ ಪ್ರತಿಯಲ್ಲಿ ಸಹಿ ಮಾಡಿಲ್ಲ. ಈ ಬಗ್ಗೆ ಗಮನಹರಿಸಿ, ಉತ್ತಮ ಸೌಕರ್ಯ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.