ಟೀಂ ಇಂಡಿಯಾಗೆ ಸೂರ್ಯನ ಆಸರೆ: ಆಫ್ಘಾನಿಸ್ತಾನಕ್ಕೆ ಕಠಿಣ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಆಫ್ಘಾನಿಸ್ತಾನ ಎದುರು ಸವಾಲಿನ ಮೊತ್ತ ಕಲೆಹಾಕಿದೆ.

ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದ್ದು, ಆಫ್ಘಾನಿಸ್ತಾನ ತಂಡಕ್ಕೆ ಕಠಿಣ ಗುರಿ ನೀಡಿದೆ.

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೂರನೇ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಕೇವಲ 8 ರನ್‌ ಗಳಿಸಿ ಫಜಲ್‌ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು.
ಇನ್ನು ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‌ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ 20 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ 24 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಬ್ಯಾಟಿಂಗ್ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.

90 ರನ್‌ಗಳಿಗೆ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ಕ್ರಿಕೆಟ್ ತಂಡಕ್ಕೆ 5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 60 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಯುಎಸ್‌ಎ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್, ಮತ್ತೊಮ್ಮೆ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 32 ರನ್ ಬಾರಿಸಿ ನವೀನ್ ಉಲ್ ಹಕ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 12 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!