ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ಇಸ್ರೋಗೆ ಇನ್ನು ನಾಸಾ ಸಾಥ್ ನೀಡಲಿದೆ.
ತಾವು ಭಾರತದ ಜೊತೆಗಿನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ನಿರ್ಧಾರ ಹೊಂದಿದ್ದೇವೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತದ ಗಗನಯಾತ್ರಿಯ ಜೊತೆಗೂಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೋವಲ್, ಜೇಕ್ ಸುಲಿವಾನ್ ಇಸ್ರೊದ ಗಗನಯಾತ್ರಿಗಳಿಗೆ ಅಮೆರಿಕದಲ್ಲಿ ತರಬೇತಿ ನೀಡಲಾಗುವುದು ಎಂದು ಜಂಟಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿಲ್ ನೆಲ್ಸನ್ ಈ ಮಾಹಿತಿ ನೀಡಿದ್ದಾರೆ.
ನಮ್ಮ ಜಂಟಿ ಸಹಭಾಗಿತ್ವ ಬಲಪಡಿಸುವ ಯೋಜನೆಯ ರೂಪರೇಷೆ ಇನ್ನಷ್ಟೇ ಸ್ಪಷ್ಟತೆ ಪಡೆಯಬೇಕಿದೆ. ಭವಿಷ್ಯದಲ್ಲಿನ ನವೀನ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಭಾರತ-ಅಮೆರಿಕ ಸಹಭಾಗಿತ್ವವನ್ನು ನಾಸಾ ಇನ್ನಷ್ಟು ವಿಸ್ತರಿಸಲಿದೆ ಎಂದು ಅವರು ಹೇಳಿದ್ದಾರೆ.