ಹೊಸದಿಗಂತ ಅಂಕೋಲಾ:
ತಾಲೂಕಿನ ಸುಂಕಸಾಳದಲ್ಲಿರುವ ‘ಬ್ಯಾಂಕ್ ಆಫ್ ಬರೋಡಾ’ ಶಾಖೆಯಲ್ಲಿ ಕಿಡಿಗೇಡಿಗಳು ದರೋಡೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಹಿಂಬದಿಯ ಶೌಚಾಲಯದ ಗೋಡೆಗೆ ಕನ್ನ ಕೊರೆದು ಒಳನುಗ್ಗಿರುವ ದುಷ್ಕರ್ಮಿಗಳು, ಹಣವಿದ್ದ ಸ್ಟ್ರಾಂಗ್ ರೂಮ್ ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಇರುವ ಈ ಬ್ಯಾಂಕಿಗೆ ಶನಿವಾರ ಮತ್ತು ಭಾನುವಾರ ರಜೆ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಈ ಎರಡು ದಿನಗಳ ಅವಧಿಯಲ್ಲೇ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ಸಿಬ್ಬಂದಿ ಬ್ಯಾಂಕಿಗೆ ಬಂದಾಗ ಗೋಡೆ ಒಡೆದಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಿಬ್ಬಂದಿಗಳಿಂದ ಮಾಹಿತಿ ಕಲೆಹಾಕುತ್ತಿದೆ.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ರಾತ್ರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ. ಸದ್ಯ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದೆ.


