NEET ಅಕ್ರಮ | ತನಿಖೆ ಮತ್ತಷ್ಟು ಚುರುಕು: ಎಫ್‌ಐಆರ್‌ ದಾಖಲಿಸಿದ ಸಿಬಿಐ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ನೀಟ್‌-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆಯ ಹೊಣೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿದೆ. ಅದರಂತೆ ತನಿಖೆ ಆರಂಭಿಸಿರುವ ಸಿಬಿಐ,ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಇನ್ನು ನೀಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹಾ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ಅವರನ್ನು ಕೇಂದ್ರ ಸರ್ಕಾರವು ಹುದ್ದೆಯಿಂದ ಕೆಳಗಿಳಿಸಿದೆ. ಅವರ ಜಾಗಕ್ಕೆ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ನೇಮಿಸಿದೆ.

ಮೇ 5 ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್-ಯುಜಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷಿತ ದಿನಾಂಕಕ್ಕಿಂತ ಹತ್ತು ದಿನ ಮುಂಚಿತವಾಗಿ ಜೂನ್ 4 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದುಷ್ಕೃತ್ಯಗಳ ಆರೋಪಗಳು ಕೇಳಿಬಂದವು, ಏಕೆಂದರೆ 67 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು (720ಕ್ಕೆ 720) ಗಳಿಸಿದ್ದರು. ಅವರಲ್ಲಿ ಕೆಲವರು ಒಂದೇ ಪರೀಕ್ಷಾ ಕೇಂದ್ರಗಳಿಂದ ಬಂದವರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಿಹಾರದಲ್ಲಿ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಕಂಡುಬಂದಿದೆ. ಕೆಲವು ಅಭ್ಯರ್ಥಿಗಳು ಪರೀಕ್ಷೆಯ ಮುನ್ನಾದಿನದಂದು ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!