ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಐವರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಅವಿವಾಹಿತರು ಹಾಗೂ ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆ ಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗುಬ್ಬಿ ಪೊಲೀಸರು ಬೇಧಿಸಿದ್ದಾರೆ.
ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಹೇಶ್ ಯು ಡಿ, ಮೆಹಬೂಬ್ ಷರೀಫ್, ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಮತ್ತು ಸೌಜನ್ಯ ಬಂಧಿತರು.
ಜೂನ್ 9ರ ರಾತ್ರಿ ಅಂತಾಪುರ ಸಮೀಪದ ದೇವಸ್ಥಾನದ ಬಳಿ ಮಲಗಿದ್ದಾಗ ಮಹಾದೇವಿ ಎಂಬುವವರ 11 ತಿಂಗಳ ಮಗುವನ್ನು ಅಪಹರಿಸಲಾಗಿತ್ತು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ವಿಶೇಷ ತಂಡವನ್ನು ರಚಿಸಿದ್ದರು. ನಂತರ ಜಾಲವನ್ನು ಪತ್ತೆ ಮಾಡಲಾಗಿದೆ.