Tuesday, January 13, 2026
Tuesday, January 13, 2026
spot_img

ಮುಂಬೈ ಪಾಲಿಕೆ ಚುನಾವಣೆ ಎಫೆಕ್ಟ್: ಮೂರು ದಿನಗಳ ಕಾಲ WPL ವೀಕ್ಷಣೆಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್ 2026ರ ನಾಲ್ಕನೇ ಆವೃತ್ತಿ ಅದ್ಧೂರಿ ಆರಂಭ ಕಂಡಿದ್ದರೂ, ಕ್ರೀಡಾ ಪ್ರೇಮಿಗಳಿಗೆ ಈಗ ಕೊಂಚ ನಿರಾಸೆಯ ಸುದ್ದಿ ಬಂದಿದೆ. ಮುಂಬೈ ಮತ್ತು ನವಿ ಮುಂಬೈನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ, ಮುಂಬರುವ ಮೂರು ಪ್ರಮುಖ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಈ ತಿಂಗಳ 15 ರಂದು ಮಹಾರಾಷ್ಟ್ರದಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಲಿದ್ದು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕರ್ತವ್ಯದಲ್ಲಿ ಇರಬೇಕಾಗುತ್ತದೆ. ಮತದಾನದ ದಿನ ಹಾಗೂ ಅದರ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ಒದಗಿಸುವುದು ಸವಾಲಾಗಿರುವುದರಿಂದ ಅಧಿಕಾರಿಗಳು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.

ಯಾವ ಪಂದ್ಯಗಳಿಗೆ ಪ್ರೇಕ್ಷಕರಿಲ್ಲ?

ಜನವರಿ 14: ದೆಹಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್

ಜನವರಿ 15: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್

ಜನವರಿ 16: ಆರ್‌ಸಿಬಿ vs ಗುಜರಾತ್ ಜೈಂಟ್ಸ್

ಈಗಾಗಲೇ ಅಧಿಕೃತ ಟಿಕೆಟಿಂಗ್ ವೇದಿಕೆಗಳಲ್ಲಿ ಜನವರಿ 14 ರಿಂದ 16 ರವರೆಗಿನ ಪಂದ್ಯಗಳ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಜನವರಿ 17 ರಂದು ನಡೆಯಲಿರುವ ಡಬಲ್ ಹೆಡರ್ ಪಂದ್ಯಗಳಿಗೆ ಟಿಕೆಟ್‌ಗಳು ಲಭ್ಯವಿದ್ದು, ಅಂದು ಮತ್ತೆ ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸಲು ಅವಕಾಶ ಸಿಗುವ ಸಾಧ್ಯತೆಯಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, “ವೇಳಾಪಟ್ಟಿ ಮೊದಲೇ ಅಂತಿಮವಾಗಿದ್ದರಿಂದ ಚುನಾವಣಾ ದಿನಾಂಕಗಳೊಂದಿಗೆ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಪಂದ್ಯಗಳು ನಿಗದಿಯಂತೆ ನಡೆಯಲಿವೆ, ಆದರೆ ಜನದಟ್ಟಣೆ ನಿಯಂತ್ರಿಸಲು ಈ ಕ್ರಮ ಅನಿವಾರ್ಯ,” ಎಂದು ತಿಳಿಸಿದ್ದಾರೆ.

Most Read

error: Content is protected !!