ಹೊಸದಿಗಂತ ಹಾಸನ:
ಬೆಲೆ ಏರಿಕೆ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಖಂಡಿಸಿ ಡಿಸಿ ಕಚೇರಿ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಎನ್.ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿ ಅಲ್ಲಿಯೂ ಕೆಲಕಾಲ ಧರಣಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆ ಉದ್ದಕ್ಕೂ ತಮಟೆ ವಾದ್ಯದ ಜೊತೆ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಬಳಿಕ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ತನ್ನ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಬೆಲೆ ಹೆಚ್ಚಿಸಿ ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ಹಾಕಲು ಮುಂದಾಗಿದೆ. ತೈಲ ಬೆಲೆ ಹೆಚ್ಚಳದಿಂದ ಇನ್ನಿತರ ವಸ್ತುಗಳು ಹಾಗೂ ಸರಕು ಸಾಗಾಣಿಕಾ ವೆಚ್ಚ ಕೂಡ ಹೆಚ್ಚಳ ಆಗಲಿದೆ ಎಂದರು.
ಜೊತೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು SEP, TSP ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಅವ್ಯವಹಾರ ಸೇರಿದಂತೆ ಅನೇಕ ಅವ್ಯವಹಾರಗಳ ಮೂಲಕ ಜನ ಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ. ಕೂಡಲೇ ಕಾಂಗ್ರೆಸ್ ಸರ್ಕಾರದ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.