ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಐಸ್ ಕ್ರೀಂ ಕೋನ್ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದು ಯಾರ ಬೆರಳು ಎಂದು ಪತ್ತೆಯಾಗಿದೆ.
ಡಿಎನ್ಎ(DNA) ಪರೀಕ್ಷೆಯಲ್ಲಿ ಅದು ಪುಣೆಯ ಫಾರ್ಚೂನ್ ಕಂಪನಿಯ ಸಹಾಯಕ ಆಪರೇಟರ್ ಮ್ಯಾನೇಜರ್ ಓಂಕಾರ್ ಪೋಟೆಯ ಬೆರಳು ಇದಾಗಿದೆ ಎಂಬುದು ಬಯಲಾಗಿದೆ. ಸಂಸ್ಥೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಲಾಡ್ ನಿವಾಸಿಯಾಗಿರುವ 26 ವರ್ಷದ ಓರ್ಲೆಂ ಬ್ರೆಂಡನ್ ಸೆರಾವೋ ಜೂ.12ರಂದು ತನ್ನ ಸಹೋದರಿ ಆರ್ಡರ್ ಮಾಡಿದ್ದ ಬಟರ್ಸ್ಕಾಚ್ ಅನ್ನು ತಿನ್ನುತ್ತಿದ್ದ. ಹಾಗೆಯೇ ತಿನ್ನುತ್ತಾ ಇರುವಾಗ ಆತನ ಬಾಯಿಗೆ ಏನೋ ಸಿಕ್ಕಿಕೊಂಡ ಹಾಗೆ ಫೀಲ್ ಆಗುತ್ತದೆ. ಬಾಯಿಯಿಂದ ತೆಗೆದು ನೋಡಿದಾಗ ಅಲ್ಲಿ ಮನುಷ್ಯ ಬೆರಳು ಪತ್ತೆ ಆಗಿತ್ತು. ಅದನ್ನು ಕಂಡು ಆತಂಕಗೊಂಡ ಓರ್ಲೆಂ, ತಕ್ಷಣ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೂ ಅಲ್ಲದೇ ಐಸ್ಕ್ರೀಂ ಕಂಪನಿಗೂ ದೂರು ಸಲ್ಲಿಸಿದ್ದರು.
ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಈ ಪರೀಕ್ಷೆಯ ವರದಿಯ ಬಂದಿದ್ದು, ಪುಣೆಯ ಫಾರ್ಚೂನ್ ಕಂಪನಿಯ ಸಹಾಯಕ ಆಪರೇಟರ್ ಮ್ಯಾನೇಜರ್ ಓಂಕಾರ್ ಪೋಟೆಯ ಬೆರಳು ಇದಾಗಿದೆ ಎಂಬುದು ಡಿಎನ್ಎ(DNA) ಪರೀಕ್ಷೆಯಲ್ಲಿ ಬಯಲಾಗಿದೆ.
ಮಲಾಡ್ ಪಿಎಸ್ನ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ರವಿ ಅದಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ಐಸ್ಕ್ರೀಮ್ನಲ್ಲಿ ಪತ್ತೆಯಾದ ಬೆರಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಿತ (ಕಂಪನಿಯ ಸಹಾಯಕ ನಿರ್ವಾಹಕ ವ್ಯವಸ್ಥಾಪಕ) ಡಿಎನ್ಎ ಸಹ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡೂ ಡಿಎನ್ಎ ಮಾದರಿಗಳು ಹೊಂದಾಣಿಕೆಯಾಗುತ್ತಿವೆ. ಈಗ, ಈ ವಿಷಯದಲ್ಲಿ ಯಾರ ನಿರ್ಲಕ್ಷ್ಯ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಐಪಿಸಿ ಸೆಕ್ಷನ್ 272, 273, ಮತ್ತು 336 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.