ಹೊಸದಿಗಂತ ಕಲಬುರಗಿ:
“ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸೋಮವಾರ ಜೇವರ್ಗಿಯಲ್ಲಿ ‘ಪ್ರಜಾಸೌಧ’, 300 ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಭಾಗದ ಜನರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ನಮಗೆ ದೊಡ್ಡ ಶಕ್ತಿ ತುಂಬಿದ್ದಾರೆ. ನಿಮ್ಮ ಈ ಋಣವನ್ನು ತೀರಿಸಲು ನಾವು ಅಭಿವೃದ್ಧಿ ಕಾರ್ಯಗಳ ಮೂಲಕ ಬಂದಿದ್ದೇವೆ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಬಜೆಟ್ ಹಂಚಿಕೆ ಮತ್ತು ಅಭಿವೃದ್ಧಿ:
ಜೇವರ್ಗಿ ಕ್ಷೇತ್ರವೊಂದಕ್ಕೆ 1,000 ಕೋಟಿ ರೂ. ಅನುದಾನ ನೀಡಲಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತಿ ವರ್ಷ 5,000 ಕೋಟಿ ರೂ. ಮೀಸಲಿಡಲಾಗಿದೆ.
ಬೀದರ್‌ನಲ್ಲಿ 2,000 ಕೋಟಿ ರೂ. ಮೊತ್ತದ ಕಾಮಗಾರಿ ಹಾಗೂ ‘ಕಲ್ಯಾಣ ಪಥ’ ಯೋಜನೆಗೆ ಚಾಲನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಹಾಸ್ಯಮಿಶ್ರಿತವಾಗಿ ಮಾತನಾಡಿದ ಡಿಸಿಎಂ, “ನಾನು ಉಪಮುಖ್ಯಮಂತ್ರಿಯಾಗಿದ್ದರೂ ನನ್ನ ಸ್ವಕ್ಷೇತ್ರದಲ್ಲಿ ಈ ಮಟ್ಟದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಭಾಗಕ್ಕೆ ಸಿಗುತ್ತಿರುವ ಅನುದಾನ ನೋಡಿದರೆ, ನನ್ನ ಕ್ಷೇತ್ರವೂ ಇದೇ ಭಾಗದಲ್ಲಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಆ ದೃಷ್ಟಿಯಿಂದ ನೀವು ನಿಜಕ್ಕೂ ಅದೃಷ್ಟವಂತರು,” ಎಂದು ಸ್ಥಳೀಯರ ಕಾಲೆಳೆದರು.


