ಹೊಸದಿಗಂತ ಕಲಬುರಗಿ:
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಟ್ಟಡಗಳಿಗಿಂತ ನುರಿತ ಶಿಕ್ಷಕರ ಅಗತ್ಯತೆ ಹೆಚ್ಚಿದೆ. ಶಾಲಾ ಕಟ್ಟಡಗಳಿಲ್ಲದಿದ್ದರೂ ಪರವಾಗಿಲ್ಲ, ಮಕ್ಕಳನ್ನು ಮರದ ಕೆಳಗೆ ಕೂರಿಸಿಯಾದರೂ ಪಾಠ ಮಾಡೋಣ. ಆದರೆ, ಗುಣಮಟ್ಟದ ಶಿಕ್ಷಣ ನೀಡಲು ಪರಿಪೂರ್ಣ ಶಿಕ್ಷಕರ ನೇಮಕಾತಿ ಮೊದಲು ಮಾಡಿ,” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನೇರ ಮನವಿ ಮಾಡಿದರು.
ಯಡ್ರಾಮಿ ತಾಲ್ಲೂಕಿನಲ್ಲಿ ಸುಮಾರು 905.87 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಪ್ರಜಾಸೌಧದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಅಭಿವೃದ್ಧಿ ಮಾದರಿಯನ್ನು ಉದಾಹರಿಸಿದ ಖರ್ಗೆ ಅವರು, “ನಮಗೆ ಸಿಂಗಾಪುರ ಅಥವಾ ಲಂಡನ್ ಆಗುವ ಆಸೆಯಿಲ್ಲ. ಮೈಸೂರು ಭಾಗದ ಮಾದರಿಯಲ್ಲಿ ನಮ್ಮ ಕಲ್ಯಾಣ ಕರ್ನಾಟಕವನ್ನೂ ಅಭಿವೃದ್ಧಿಪಡಿಸಿ. ಹಳೇ ಮೈಸೂರು ಭಾಗದಲ್ಲಿ ಹೊಸ ಯೋಜನೆಗಳು ‘ಬಫೆ ಸಿಸ್ಟಮ್’ ನಂತೆ ತಕ್ಷಣಕ್ಕೆ ಸಿಗುತ್ತವೆ. ಆದರೆ ನಮ್ಮ ಭಾಗದಲ್ಲಿ ಅದು ‘ಪಂಕ್ತಿ ಭೋಜನ’ದಂತೆ ತಡವಾಗಿ ತಲುಪುತ್ತಿದೆ. ಈ ತಾರತಮ್ಯ ಹೋಗಲಾಡಿಸಿ, ಯಾವುದೇ ಹೊಸ ಯೋಜನೆ ಬಂದರೂ ಮೊದಲು ಈ ಹಿಂದುಳಿದ ಭಾಗಕ್ಕೆ ಆದ್ಯತೆ ನೀಡಿ,” ಎಂದರು.
ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳಲ್ಲಿ ಇಂದು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರೆ ಅದಕ್ಕೆ 371-ಜೆ ಕಲಂ ಅಡಿಯಲ್ಲಿ ಸಿಕ್ಕ ವಿಶೇಷ ಸ್ಥಾನಮಾನವೇ ಕಾರಣ ಎಂದು ಅವರು ಒತ್ತಿ ಹೇಳಿದರು. ಈ ಭಾಗದ ಶೈಕ್ಷಣಿಕ ಹಿಂದುಳಿಯುವಿಕೆಗೆ ಶಿಕ್ಷಕರ ಕೊರತೆಯೇ ಪ್ರಧಾನ ಕಾರಣವಾಗಿದ್ದು, ಸರ್ಕಾರ ಕೂಡಲೇ ಯುದ್ಧೋಪಾದಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದರು.


