ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗುತ್ತಿದ್ದು, ಬಿ.ಕೆ. ಹರಿಪ್ರಸಾದ್ ಅವರನ್ನು ಸಿಎಂ ಮಾಡುವಂತೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಅವರು ಪುನರುಚ್ಚರಿಸಿದ್ದಾರೆ.
ಈಡಿಗ ಸಮುದಾಯವು ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿದ್ದರೆ ಬಿ.ಕೆ.ಹರಿಪ್ರಸಾದ್ ಅವರನ್ನೇ ಸಿಎಂ (CM Post) ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರ ಹಿಂದೆ ಹಿಂದುಳಿದ ಸಮಾಜ ಇದೆ, ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತೇನೆ. ಸಿಎಂ, ಡಿಸಿಎಂ ಸ್ಥಾನ ಬದಲಾದರೆ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಎಂ ಸ್ಥಾನ ನೀಡಬೇಕು. ಇಲ್ಲದಿದ್ದರೆ ಡಿಸಿಎಂ ಆಗಿ ತೆಗೆದುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದರೆ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು. ಅಪಮಾನ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಮಠಕ್ಕೆ ಕಾಲಿಡಬೇಡಿ. ನೀವು ಮಾಡಿದ್ದೆಲ್ಲಾ ಸರಿ ಅಂತ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ಧರಿಲ್ಲ. ನೀವು ಧೈರ್ಯವಾಗಿ ಹೇಳಿ ಮಠಕ್ಕೆ ಕಾಲಿಡಲ್ಲ ಅಂತ, ಆಗ ನಾವು ರಾಜಕೀಯಕ್ಕೆ ಬರಲ್ಲ ಎಂದು ಸವಾಲು ಹಾಕಿದರು.
ಚಂದ್ರಶೇಖರ ಸ್ವಾಮೀಜಿಗಳು ಹೇಳಿದಾಗ ಎಲ್ಲರೂ ಸ್ವಾಗತ ಮಾಡಿದರು. ಡಿ.ಕೆ.ಸುರೇಶ್, ಬಾಲಕೃಷ್ಣ ಹಾಗೂ ಚಲುವರಾಯಸ್ವಾಮಿ ಸ್ವಾಗತ ಮಾಡಿದರು. ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡಿ ಅಂತ ಹೇಳೋದು. ಇದು ಡಿ.ಕೆ.ಶಿವಕುಮಾರ ಅವರ ರಾಜಕೀಯ ಗಿಮಿಕ್, ನಮಗೆ ನೋವಾಗಿದ್ದಕ್ಕೆ ನಾವು ಹೇಳುತ್ತಿದ್ದೇವೆ. ನಮಗೆ ಯಾರು ಡಿಸಿಎಂ ಸ್ಥಾನ ಕೊಟ್ಟಿಲ್ಲ, ಈಗಾಗಲೇ ಡಿಕೆಶಿ ಡಿಸಿಎಂ ಇದ್ದಾರೆ. ಜೊತೆಗೆ ಒಕ್ಕಲಿಗ ಸಮುದಾಯದ ಸಚಿವರು ಇದ್ದಾರೆ. ಚಂದ್ರಶೇಖರ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ ಅವರದ್ದು ರಾಜಕೀಯ ಗಿಮಿಕ್‌ನ ಭಾಗ ಎಂದು ಕಿಡಿಕಾರಿದರು.
ಬಿ ಕೆ ಹರಿಪ್ರಸಾದ್ ಅರ್ಹತಾ ಮಾನದಂಡಗಳ ಅನುಸಾರ ಹತ್ತನೇ ಸ್ಥಾನದಿಂದಲೂ ಕೆಳಗಿರುವರು.ಮಾನದಂಡಗಳಲ್ಲಿ ಹೊಂದಿರುವ ಸಂಪತ್ತು ಕೊನೆಯ ಯೋಗ್ಯತೆ.