ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಪ್ರಿಯರ ಬಹುದಿನಗಳ ಆಸೆ ಈಡೇರುವ ಕಾಲ ಸಮೀಪಿಸಿದ್ದು, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನೆರೆಯ ತೆಲಂಗಾಣದ ಹೈದರಾಬಾದ್ನಲ್ಲಿ ಫಿಲಂ ಸಿಟಿ ಇದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್ಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ, ಮುಂದೆಯೂ ಮಾಡಲಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಲಾಗಿದೆ. ಚಿತ್ರನಗರಿ ಡಾ. ರಾಜ್ ಕುಮಾರ್ ಕನಸಾಗಿತ್ತು, ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.