ಹೊಸದಿಗಂತ ಡಿಜಿಟಲ್ ಡೆಸ್ಕ್:
ತನಗೆ ಕೆಲಸ ಕೊಡಿಸಿ ಜೀವನ ರೂಪಿಸಿದ ಪತ್ನಿಗೆ ದ್ರೋಹ ಬಗೆದು, ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜೆಡ್ರೆಲಾ ಜಾಕೂಬ್ ಆರೂಪ್ ಎಂದು ಗುರುತಿಸಲಾಗಿದ್ದು, ಈತನನ್ನು ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪತ್ನಿ ಪ್ರತಿಷ್ಠಿತ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಉದ್ಯೋಗದಲ್ಲಿದ್ದರು. ಆದರೆ ಪತಿ ಜಾಕೂಬ್‌ಗೆ ಉದ್ಯೋಗವಿಲ್ಲದ ಕಾರಣ, ಪತ್ನಿ ತನ್ನ ಕೆಲಸವನ್ನೇ ಬಿಟ್ಟುಕೊಟ್ಟು ಆತನಿಗೆ ಉದ್ಯೋಗ ಸಿಗುವಂತೆ ನೆರವಾಗಿದ್ದರು. ಆದರೆ ಮಗು ಜನಿಸಿದ ನಂತರ ಜಾಕೂಬ್ ಬಣ್ಣ ಬದಲಾಗಿದ್ದು, ಪತ್ನಿಯ ಮೇಲೆ ಜಾತಿ ನಿಂದನೆ ಮಾಡುವುದಲ್ಲದೆ, ದೈಹಿಕ ಮತ್ತು ಮಾನಸಿಕವಾಗಿ ತೀವ್ರ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗರ್ಭಪಾತವಾಗುವ ಮಟ್ಟಿಗೆ ಆಕೆಯ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪವೂ ಈತನ ಮೇಲಿದೆ.
ಇತ್ತ ಪತ್ನಿಗೆ ನರಕಯಾತನೆ ನೀಡುತ್ತಿದ್ದ ಜಾಕೂಬ್, ಇನ್ನೊಂದೆಡೆ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನು. ಅವಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುತ್ತಾ ವಿಹರಿಸುತ್ತಿದ್ದನು. ಈ ವಿಚಾರ ಪತ್ನಿಯ ಗಮನಕ್ಕೆ ಬಂದ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ನಿ ನೀಡಿದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದರ ಮೇಲೆ ಹಠಾತ್ ದಾಳಿ ನಡೆಸಿದರು. ಈ ವೇಳೆ ಪ್ರೇಯಸಿಯೊಂದಿಗೆ ಏಕಾಂತದಲ್ಲಿದ್ದ ಜಾಕೂಬ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣದ ಅಡಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


