ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ರೋಡ್ ಶೋ ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು ಮುಂಬೈ ನಗರಿ ಸಿದ್ಧವಾಗಿ ನಿಂತಿದೆ.
ಆಟಗಾರರು ಈಗಾಗಲೇ ಮುಂಬೈ ತಲುಪಿದ್ದಾರೆ. ಈ ವಿಜಯಯಾತ್ರೆಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಹಾಗೆಯೇ ಸ್ಪೋರ್ಟ್ಸ್ 18ನಲ್ಲಿ, ಜಿಯೋ ಸಿನಿಮಾ ಆ್ಯಪ್ನಲ್ಲಿಯೂ ಈ ವಿಜಯೋತ್ಸವದ ನೇರ ಪ್ರಸಾರ ಇರಲಿದೆ.
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಟ್ವೀಟ್ ಮಾಡಿದ್ದರು. ಈಗಾಗಲೇ ಅಭಿಮಾನಿಗಳು ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದಾರೆ.
ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್ನಿಂದ ಸರಿಯಾಗಿ 5 ಗಂಟೆಗೆ ರೋಡ್ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ಬಹುಮಾನ ಮೊತ್ತವನ್ನು ಕೂಡ ಪ್ರದಾನ ಮಾಡಲಾಗುತ್ತದೆ.
ಮುಂಬೈಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ ವಿಶ್ವಕಪ್ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜತೆಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು.