ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದಲ್ಲಿ ಒಬ್ಬರ ಹಿಂದಂತೆ ಐದು ಮಂದಿ ಬಾವಿಗೆ ಇಳಿದಿದ್ದು, ವಿಷ ಅನಿಲ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಂಜಗೀರ್-ಚಂಪಾ ಜಿಲ್ಲೆಯ ಬಿರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಕಿರ್ದಾ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮೃತರನ್ನು ರಾಮಚಂದ್ರ ಜೈಸ್ವಾಲ್, ರಮೇಶ್ ಪಟೇಲ್, ರಾಜೇಂದ್ರ ಪಟೇಲ್, ಜಿತೇಂದ್ರ ಪಟೇಲ್ ಮತ್ತು ಟಿಕೇಶ್ವರ್ ಚಂದ್ರ ಎಂದು ಗುರುತಿಸಲಾಗಿದೆ ಎಂದು ಬಿಲಾಸ್ಪುರ ರೇಂಜ್ ಪೊಲೀಸ್ ಮಹಾನಿರೀಕ್ಷಕ ಸಂಜೀವ್ ಶುಕ್ಲಾ ಅವರು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜೈಸ್ವಾಲ್ ಅವರು ಬಾವಿಗೆ ಬಿದ್ದ ಮರದ ಪಟ್ಟಿಯೊಂದನ್ನು ಹೊರತೆಗೆಯಲು ಬಾವಿಗೆ ಇಳಿದಿದ್ದಾರೆ. ಆದರೆ ಅವರು ಅಲ್ಲಿಯೇ ಮೂರ್ಛೆ ಹೋಗಿ ಬಿದ್ದಿದ್ದಾರೆ. ನಂತರ ಅವರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೂಗಿದ್ದು, ಪಟೇಲ್ ಕುಟುಂಬದ ಇತರ ಮೂವರು ಬಾವಿಗೆ ಇಳಿದಿದ್ದಾರೆ. ನಾಲ್ವರೂ ಹೊರಗೆ ಬಾರದಿದ್ದಾಗ, ಅವರನ್ನು ರಕ್ಷಿಸಲು ಚಂದ್ರು ಸಹ ಬಾವಿಗೆ ಇಳಿದಿದ್ದು, ಐವರೂ ಮೃತಪಟ್ಟಿದ್ದಾರೆ.
ನಂತರ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡವನ್ನು ನಿಯೋಜಿಸಲಾಗಿದೆ. ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿದ್ದು, ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶುಕ್ಲಾ ಅವರು ಹೇಳಿದ್ದಾರೆ.