ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲಾಗಿದ್ದು, ಇದರ ಬೆನ್ನಲ್ಲೇ ಪ್ರಧಾನಿ ರಿಷಿ ಸುನಾಕ್ ಕ್ಷಮೆ ಕೇಳಿದ್ದಾರೆ.
ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಒಟ್ಟು 650 ಸ್ಥಾನಗಳಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದೆ.
ಇತ್ತ ಪಕ್ಷದ ಸೋಲಿಗೆ ಕ್ಷಮೆ ಕೇಳಿದ ರಿಷಿ ಸುನಕ್, ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್ ಅವರನ್ನು ಕರೆದಿದ್ದೇನೆ ಎಂದರು. ಕನ್ಸರ್ವೇಟಿವ್ ಪಕ್ಷ ಸೋತರೂ ರಿಚ್ಮಂಡ್ ನಾರ್ತಲರ್ಟನ್ ಕ್ಷೇತ್ರದಿಂದ ರಿಷಿ ಸುನಕ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
ಲೇಬರ್ ಪಾರ್ಟಿ ಗೆದ್ದ ಬಳಿಕ ಭಾಷಣ ಮಾಡಿದ ಪ್ರಧಾನಿ ಅಭ್ಯರ್ಥಿ ಕೀರ್ ಸ್ಟಾರ್ಮರ್, ಅವ್ಯವಸ್ಥೆಯನ್ನು ಕೊನೆಗೊಳಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ ಮತ್ತು ಅದನ್ನೇ ನಾವು ಮಾಡುತ್ತೇವೆ. ಇನ್ನು ಮುಂದೆ ಬದಲಾವಣೆ ಪ್ರಾರಂಭವಾಗಲಿದೆ. ನಮ್ಮ ದೇಶವನ್ನು ಮತ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.