ಹೊಸದಿಗಂತ ವರದಿ, ದಾವಣಗೆರೆ :
ಸಿಸೇರಿಯನ್ ಮಾಡಿ ತಾಯಿ ಗರ್ಭದಿಂದ ಹೊರೆ ತೆಗೆಯುವ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು, ಕುಟುಂಬಸ್ಥರು ಜಿಲ್ಲಾಸ್ಪತ್ರೆ ಎದುರು ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಕೊಂಡಜ್ಜಿ ರಸ್ತೆ ವಾಸಿಯಾದ ಅರ್ಜುನ್ ಪತ್ನಿ ಅಮೃತಾ ಎಂಬುವರನ್ನು ಹೆರಿಗೆಗಾಗಿ ಜೂ.26ರಂದು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ದಾಖಲಿಸಲಾಗಿತ್ತು. ಜೂ.27ರಂದು ಸಿಸೇರಿಯನ್ ಮಾಡಿ ಮಗುವನ್ನು ಹೊರ ತೆಗೆಯುವ ವೇಳೆ ವೈದ್ಯ ಡಾ.ನಿಜಾಮುದ್ದೀನ್ ನಿರ್ಲಕ್ಷ್ಯ ತೋರಿ, ಕೂಸಿನ ಮರ್ಮಾಂಗವನ್ನೇ ಕತ್ತರಿಸುವ ಮೂಲಕ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ.
ಮಗುವಿನ ಪೋಷಕರು, ಕುಟುಂಬಸ್ಥರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಎನ್.ಹೆಚ್.ಹಾಲೇಶ ಮಾತನಾಡಿ, ಅಮೃತಾರಿಗೆ ಬಿಪಿ ಹೆಚ್ಚಾಗಿದ್ದರಿಂದ ಸಹಜ ಹೆರಿಗೆ ಬದಲು, ಸಿಸೇರಿಯನ್ ಮಾಡಿ ಕೂಸನ್ನು ಹೊರ ತೆಗೆಯುವುದಾಗಿ ವೈದ್ಯರು ಹೇಳಿದ್ದರು. ಈ ವೇಳೆ ವೈದ್ಯ ಡಾ.ನಿಜಾಮುದ್ದೀನ್ ನಿರ್ಲಕ್ಷ್ಯ ವಹಿಸಿ ನವಜಾತ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿದ್ದರಿಂದ ಕೂಸು ಸಾವನ್ನಪ್ಪಿದೆ. ನಂತರ ಇದು ಗಮನಕ್ಕೆ ಬಂದು ತಕ್ಷಣವೇ ನವಜಾತ ಶಿಶುವನ್ನು ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಂತಾಜನಕ ಸ್ಥಿತಿಯಲ್ಲಿದ್ದ ನವಜಾತ ಶಿಶು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ದೂರಿದರು.
ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಮಗುವಿನ ಸಾವಿಗೆ ಕಾರಣರಾದ ವೈದ್ಯರನ್ನು ಸೇವೆಯಿಂದ ಅಮಾನತುಪಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ದೂರು ನೀಡುವ ಜೊತೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲೂ ಮಗುವಿನ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ದೂರು ದಾಖಲಿಸುತ್ತಿದ್ದೇವೆ ಎಂದು ಅವರು ಎಚ್ಚರಿಸಿದರು.
ಮಗುವಿನ ತಂದೆ ಅರ್ಜುನ್, ಬಾಣಂತಿ ತಾಯಿ ಅಮೃತಾ, ಚಂದ್ರಕಲಾ, ರಾಧಮ್ಮ, ಗೀತಮ್ಮ, ಸಂಘಟನೆಯ ಹರೀಶ, ಚಂದ್ರಪ್ಪ, ಮಂಜುನಾಥ, ಶಿವರಾಜ, ಬಸವರಾಜ, ಸಂತೋಷ, ಶಿವು, ರಮೇಶ, ವಿನಾಯಕ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು. ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿದ ವೈದ್ಯರಿಗೆ ಜಿಲ್ಲಾಸ್ಪತ್ರೆ ಅಧೀಕ್ಷಕರು ನೋಟೀಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲು ಜಿಲ್ಲಾ ಸರ್ಜನ್ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.