WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿಗೂ ರೋಹಿತ್ ಶರ್ಮಾ ನಾಯಕ: ಜಯ್‌ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಈ ಮೂಲಕ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಗೆಲುವನ್ನು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್, ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ್‌ ಶಾ ಅರ್ಪಿಸಿದ್ದಾರೆ.

ಒಂದು ವರ್ಷದೊಳಗೆ ನಾವು ಮೂರು ಫೈನಲ್‌ ಪಂದ್ಯ ಆಡಿದ್ದೇವೆ. ಕಳೆದ ವರ್ಷ ಜೂನ್ 11 ರಂದು ನಾವು WTC ಫೈನಲ್‌ನಲ್ಲಿ ಸೋತಿದ್ದೇವೆ. ನವೆಂಬರ್ 19 ರಂದು 10 ಪಂದ್ಯಗಳನ್ನು ಗೆದ್ದು ನಾವು ಹೃದಯಗಳನ್ನು ಗೆದ್ದರೂ ಏಕದಿನ ವಿಶ್ವಕಪ್‌ ಗೆಲ್ಲಲು ವಿಫಲವಾಗಿದ್ದೇವೆ. ಆದರೆ ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಾನು ಹೇಳಿದಂತೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೃದಯಗಳನ್ನು ಮತ್ತು ವಿಶ್ವಕಪ್ ಗೆದ್ದಿದೆ ಎಂದು ತಿಳಿಸಿದರು.

ಫೈನಲ್‌ನ ಕೊನೆಯ ಐದು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಬೌಂಡರಿ ಲೈನ್‌ ಬಳಿ ಅತ್ಯುತ್ತಮ ಕ್ಯಾಚ್‌ ಹಿಡಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಜಯ್‌ ಶಾ ಶ್ಲಾಘಿಸಿದರು.

2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಶಾ ಅವರ ಹೇಳಿಕೆಯಿಂದ ಭಾರತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಪಾಕಿಸ್ತಾನಕ್ಕೆ ತೆರಳುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!