ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸೃಷ್ಟಿರುವ ಕೈಲಾಸ ದೇಶ ಎಲ್ಲಿದೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗುವ ದಿನ ದೂರವಿಲ್ಲ. ಈ ಬಾರಿ ಗುರು ಪೂರ್ಣಿಮೆ ದಿನ ನಿತ್ಯಾನಂದ ತಮ್ಮ ಕೈಲಾಸ ದೇಶದ ವಿಳಾಸ ಬಹಿರಂಗಪಡಿಸಲಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ 2019ರಲ್ಲಿ ನಿತ್ಯಾನಂದ ಬಿಡದಿ ಆಶ್ರಮದಿಂದ ಪರಾರಿಯಾಗಿದ್ದ. ಬಳಿಕ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಸೃಷ್ಟಿಸಿರುವ ನಿತ್ಯಾನಂದನ, ವಿಶ್ವಸಂಸ್ಥೆಯಲ್ಲೂ ತನ್ನ ದೇಶದ ಪ್ರತಿನಿಧಿಗಳನ್ನು ಕಳುಹಿಸಿರುವ ಕೆಲ ಫೋಟೋಗಳು ಬಹಿರಂಗವಾಗಿತ್ತು. ಕೈಲಾಸ ದೇಶ ಎಲ್ಲಿದೆ ಅನ್ನೋ ಪ್ರಶ್ನೆಗಳಿಗೆ ಮಾತ್ರ ಉತ್ತರವೇ ಇರಲಿಲ್ಲ. ನಿತ್ಯಾನಂದ ಹೇಳುವ ಪ್ರಕಾರ ಕೈಲಾಸ ದೇಶ ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯಾ ಅನ್ನೋ ಅನುಮಾನಗಳು ಇವೆ. ಈ ಅನುಮಾನ, ಕುತೂಹಲದ ನಡುವೆ ಇದೀಗ ಸ್ವತಃ ನಿತ್ಯಾನಂದ ಕೈಲಾಸ ದೇಶದ ವಿಳಾಸ ಬಹಿರಂಗ ಮಾಡುವುದಾಗಿ ಹೇಳಿದ್ದಾನೆ.
ಹಲುವ ವರ್ಷಗಳ ಕಾಯುವಿಕೆ ಅಂತ್ಯಗೊಳ್ಳುತ್ತಿದೆ. ಊಹಾಪೋಹ, ಕುತೂಹಲ, ಅನುಮಾನಗಳ ಬಳಿಕ ಕೈಲಾಸ ಗರು ಪೂರ್ಣಿಮೆ ದಿನ(ಜುಲೈ 21) ಸೌರ್ವಭೌಮ ದೇಶವಾದ ಕೈಲಾಸದ ವಿಳಾಸ ಬಹಿರಂಗಪಡಿಸುತ್ತಿದೆ. ಕೈಲಾಸ ದೇಶ ನಿಜಕ್ಕೂ ಇದೆಯಾ? ಅನ್ನೋ ಪ್ರಶ್ನೆ, ವದಂತಿಗಳನ್ನು ನೀವು ಕೇಳಿರುತ್ತೀರಿ. ಈ ಗುರು ಪೂರ್ಣಿಮೆ ದಿನ ಕೈಲಾಸ ಜಗತ್ತಿಗೆ ತನ್ನ ಬಾಗಿಲು ತೆರೆಯುತ್ತಿದೆ. ಕೈಲಾಸ ಹಿಂದುಗಳ ದೇಶ. ಅಪ್ಪಟ ಹಿಂದುಗಳು ಕೈಲಾಸದ ದೇಶದ ಪ್ರಜೆಯಾಗಲು ಸುವರ್ಣ ಅವಕಾಶವಿದೆ. ಕೈಲಾಸ ಹಿಂದು ದೇಶದ ಪ್ರಜೆಯಾಗಲು ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಅವಕಾಶ ನಿಮ್ಮ ಜೀವಿತದ ಅವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಬರಲಿದೆ. ಮಿಸ್ ಮಾಡಿಕೊಳ್ಳಬೇಡಿ ಎಂದು ನಿತ್ಯಾನಂದ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಪ್ರಕಟಿಸಿದ್ದಾನೆ.
ಕೆಲ ವರ್ಷಗಳ ಹಿಂದೆ ಕೈಲಾಸ ದೇಶದ ಸ್ಥಾಪನೆ, ಇರುವಿಕೆ ಕುರಿತು ಊಹಾಪೋಹಗಳು ಹೆಚ್ಚಾದಾಗ, ಕೈಲಾಸ ದೇಶದ ಪ್ರಜೆಯಾಗಲು ಅರ್ಜಿಯನ್ನು ಅಹ್ವಾನಿಸಲಾಗಿತ್ತು. ಇದೀಗ ಜುಲೈ 21ಕ್ಕೆ ಕೈಲಾಸ ದೇಶದ ವಿಳಾಸ ಬಹಿರಂಗ ಪಡಿಸಲಾಗುತ್ತದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ. ಇದೇ ವೇಳೆ ಕೈಲಾಸದ ದೇಶಕ್ಕೆ ಆಗಮಿಸಿ, ಅಲ್ಲಿನ ಪ್ರಜೆಯಾಗಲೂ ಅವಕಾಶ ನೀಡುವುದಾಗಿ ಹೇಳಿದ್ದಾನೆ.