ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೀರೋ ಹಾಕಿ ಇಂಡಿಯಾ ಲೀಗ್‌ನಲ್ಲಿ ಸತತ ಪ್ರಯತ್ನದ ನಂತರ ಎಸ್‌ಜಿ ಪೈಪರ್ಸ್ ತಂಡವು ತನ್ನ ಚೊಚ್ಚಲ ಗೆಲುವನ್ನು ದಾಖಲಿಸಿದೆ. ನಿನ್ನೆ ನಡೆದ ರೋಚಕ ಹಣಾಹಣಿಯಲ್ಲಿ ಪೈಪರ್ಸ್ ತಂಡವು ಬಲಿಷ್ಠ ಹೈದರಾಬಾದ್ ತೂಫಾನ್ಸ್ ವಿರುದ್ಧ 2-1 ಅಂತರದ ಭರ್ಜರಿ ಜಯ ಸಾಧಿಸಿತು.
ಎಸ್‌ಜಿ ಪೈಪರ್ಸ್ ಪರ ಸ್ಟ್ರೈಕರ್ ಥಾಮಸ್ ಡೊಮೇನೇ ಪಂದ್ಯದ ಹೀರೊ ಎನಿಸಿಕೊಂಡರು. ಆಟದ 8ನೇ ಮತ್ತು 29ನೇ ನಿಮಿಷದಲ್ಲಿ ಅದ್ಭುತ ಗೋಲುಗಳನ್ನು ದಾಖಲಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಹೈದರಾಬಾದ್ ತೂಫಾನ್ಸ್ ಪರ 41ನೇ ನಿಮಿಷದಲ್ಲಿ ಅಮನ್ದೀಪ್ ಲಕ್ರಾ ಏಕೈಕ ಗೋಲು ಗಳಿಸಿ ಹೋರಾಟ ನಡೆಸಿದರೂ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಪಂದ್ಯದ ಆರಂಭದಿಂದಲೇ ಎಸ್‌ಜಿ ಪೈಪರ್ಸ್ ಆಕ್ರಮಣಕಾರಿ ತಂತ್ರ ಅನುಸರಿಸಿತು. ದಿಲ್ರಾಜ್ ಸಿಂಗ್ ಅವರ ಚಾಕಚಕ್ಯತೆಯ ಆಟದಿಂದ ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿದ ಪೈಪರ್ಸ್, ಹೈದರಾಬಾದ್ ರಕ್ಷಣಾ ಪಡೆಯ ಮೇಲೆ ನಿರಂತರ ಒತ್ತಡ ಹೇರಿತು. ಎರಡನೇ ಕ್ವಾರ್ಟರ್‌ನಲ್ಲಿ ರೋಮನ್ ಡುವೆಕೋಟ್ ಅವರ ಚಮತ್ಕಾರಿ ಡ್ರಿಬ್ಲಿಂಗ್ ಅನ್ನು ಡೊಮೇನೇ ಅವರು ಸುಲಭವಾಗಿ ಗೋಲಾಗಿ ಪರಿವರ್ತಿಸಿದರು.
ಪಂದ್ಯದ ಅಂತಿಮ ಹಂತದಲ್ಲಿ ಹೈದರಾಬಾದ್ ತೂಫಾನ್ಸ್ ಸತತ ದಾಳಿಗಳನ್ನು ನಡೆಸಿತು. ಆದರೆ ಪೈಪರ್ಸ್ ಗೋಲ್‌ಕೀಪರ್ ಟೊಮಾಸ್ ಸ್ಯಾಂಟಿಯಾಗೋ ಗೋಡೆ ಎಂಬಂತೆ ನಿಂತು ಎದುರಾಳಿಗಳ ಹಲವು ಅಪಾಯಕಾರಿ ಶಾಟ್‌ಗಳನ್ನು ತಡೆದರು. ವಿಶೇಷವಾಗಿ ಟಿಮ್ ಬ್ರಾಂಡ್ ಮತ್ತು ಮಿಚೆಲ್ ಸ್ಟ್ರುಥಾಫ್ ಅವರ ಗೋಲು ಗಳಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಈ ಗೆಲುವಿನೊಂದಿಗೆ ಎಸ್‌ಜಿ ಪೈಪರ್ಸ್ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಆತ್ಮವಿಶ್ವಾಸದಿಂದ ಬೀಗುತ್ತಿರುವ ಪೈಪರ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಜನವರಿ 14ರಂದು ರಾಂಚಿಯಲ್ಲೇ ಸ್ಥಳೀಯ ತಂಡವಾದ ರಾಂಚಿ ರಾಯಲ್ಸ್ ವಿರುದ್ಧ ಎದುರಿಸಲಿದೆ.


