ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ದಿನಗಳ ರಷ್ಯಾ ಮತ್ತು ಆಸ್ಟ್ರೀಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ರಷ್ಯಾ ರಾಜಧಾನಿ ಮಾಸ್ಕೋ ತಲುಪಿದ್ದಾರೆ. ನರೇಂದ್ರ ಮೋದಿ ಅವರು ರಷ್ಯಾ ತಲುಪುತ್ತಲೇ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಅನಿವಾಸಿ ಭಾರತೀಯರು, ರಷ್ಯಾ ನಾಗರಿಕರು ಭಜನೆ, ಹಾಡು, ಜೈಕಾರದ ಮೂಲಕ ಭಾರತದ ಪ್ರಧಾನಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ರಷ್ಯಾ ಪ್ರವಾಸ ಕೊಂಡಿದ್ದು, ಇಂದು ಮತ್ತು ನಾಳೆ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ಬುಧವಾರ ಆಸ್ಟ್ರಿಯಾಗೆ ತೆರಳಿ ಗುರುವಾರದವರೆಗೂ ಅಲ್ಲೆ ಇರಲಿದ್ದಾರೆ. ರಷ್ಯಾ ನಾಗರಿಕರಂತೂ ಮಾಸ್ಕೋದಲ್ಲಿರುವ, ಮೋದಿ ತಂಗಲಿರುವ ಹೋಟೆಲ್ ಎದುರು, ಭಾರತೀಯ ಶೈಲಿಯ ದಿರಸುಗಳನ್ನು ಧರಿಸಿ ಭಜನೆ, ಹಾಡು, ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನು ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ ನರೇಂದ್ರ ಮೋದಿ ಅವರಿಗೆ ಔತಣ ಕೂಡ ಏರ್ಪಡಿಸಿದ್ದಾರೆ. ಮಂಗಳವಾರ ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದೇ ವೇಳೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಭೇಟಿ ವೇಳೆ ಉಭಯ ರಾಷ್ಟಗಳು ರಕ್ಷಣೆ, ಅನಿಲ ಮತ್ತು ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.