ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಸೇನೆ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ, ಆರು ಯೋಧರು ಗಾಯಗೊಂಡಿದ್ದು, ಅವರನ್ನು ಸೇನೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಠುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ಸೋಮವಾರಮಧ್ಯಾಹ್ನ ದಾಳಿ ನಡೆಸಿದ ಬಳಿಕ ಯೋಧರು ಕಾರ್ಯಾಚರಣೆ ಕೈಗೊಂಡಾಗ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಕಠುವಾ ಅರಣ್ಯ ಪ್ರದೇಶವನ್ನು ಸುತ್ತುವರಿದ ಯೋಧರು ಉಗ್ರರಿಗಾಗಿ ಶೋಧ ನಡೆಸುತ್ತಿದ್ದರು. ಇದೇ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಯೋಧರು ಹಾಗೂ ಉಗ್ರರ ಮಧ್ಯೆ ಸತತ ಗುಂಡಿನ ಚಕಮಕಿ ನಡೆದಿದೆ. ಆದರೆ, ಉಗ್ರರ ಗುಂಡಿಗೆ ಯೋಧರು ಹುತಾತ್ಮರಾದರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.