ಹೊಸದಿಗಂತ ಹಾಸನ:
ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ನದಿಗೆ ಎಸೆದಿದ್ದಾನೆ.
ಕೊಲೆಯಾದ ದುರ್ದೈವಿಯನ್ನು ರಾಧಾ (40) ಎಂದು ಗುರುತಿಸಲಾಗಿದ್ದು, ಈಕೆಯ ಪತಿ ಕುಮಾರ (46) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇವರಿಬ್ಬರಿಗೂ 22 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ, ಪತ್ನಿಯ ಶೀಲದ ಮೇಲೆ ಸಂಶಯ ಪಡುತ್ತಿದ್ದ ಕುಮಾರ ನಿರಂತರವಾಗಿ ಜಗಳವಾಡುತ್ತಿದ್ದನು. ಈ ಕಾರಣಕ್ಕಾಗಿಯೇ ದಂಪತಿಗಳು ಕಳೆದ 8 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದರು. ಮೃತ ರಾಧಾ ಅವರು ಹಾಸನದ ಆಡುವಳ್ಳಿಯಲ್ಲಿ ನೆಲೆಸಿದ್ದರು.
ಜನವರಿ 10 ರಂದು ರಾಧಾ ಅವರು ಯಡೂರು ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ರಾತ್ರಿ 10:30ರ ಸುಮಾರಿಗೆ ಪತಿ ಕುಮಾರ ಮತ್ತೆ ಹಳೆಯ ವಿಚಾರ ತೆಗೆದು ಜಗಳವಾಡಿದ್ದಾನೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಕುಮಾರ ಪತ್ನಿಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಯಾರಿಗೂ ತಿಳಿಯದಂತೆ ರಾತ್ರಿ 12 ಗಂಟೆಯ ನಂತರ ಶವವನ್ನು ಬಟ್ಟೆಯಲ್ಲಿ ಸುತ್ತಿ, ತನ್ನ ಬೈಕ್ ಮೇಲೆ ತೆಗೆದುಕೊಂಡು ಹೋಗಿ ಹಾಸನದ ಹೊರವಲಯದ ಕಂದಲಿ ಎಂಬಲ್ಲಿ ಹರಿಯುವ ಯಗಚಿ ನದಿಗೆ ಎಸೆದಿದ್ದಾನೆ.
ತಾಯಿ ಕಾಣೆಯಾದ ಬಗ್ಗೆ ಪುತ್ರ ವಿಶ್ವಾಸ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಯಗಚಿ ನದಿಯಲ್ಲಿ ರಾಧಾ ಅವರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಆಲೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಕುಮಾರನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


