ಹೊಸದಿಗಂತ ಹಾಸನ:
ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೋಗಲಿ ಗ್ರಾಮದ ನಿವಾಸಿ ಶೋಭಾ (40) ಎಂಬುವವರೇ ಮೃತ ದುರ್ದೈವಿ. ಇವರು ಎಂದಿನಂತೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬಂದ ಕಾಡಾನೆ ಇವರ ಮೇಲೆ ದಾಳಿ ಮಾಡಿದೆ. ರೊಚ್ಚಿಗೆದ್ದ ಆನೆ ಇವರನ್ನು ತುಳಿದು ಸಾಯಿಸಿದ್ದು, ಸ್ಥಳದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ದುರಂತಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ:
ದಾಳಿ ಮಾಡಿದ ಆನೆಯನ್ನು ಮರಳಿ ಕಾಡಿಗೆ ಓಡಿಸಲು ಅಥವಾ ಅಗತ್ಯವಿದ್ದರೆ ಸೆರೆ ಹಿಡಿಯಲು ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಸೂಚನೆ. ಮೃತ ಕುಟುಂಬಕ್ಕೆ ನಿಯಮಾನುಸಾರ ತಕ್ಷಣದ ಪರಿಹಾರ ಧನ ಒದಗಿಸಲು ಆದೇಶ.
ಆನೆಗಳ ಸಂಚಾರದ ಬಗ್ಗೆ ಸ್ಥಳೀಯರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ.
“ಪ್ರತಿಯೊಂದು ಜೀವವೂ ಅಮೂಲ್ಯವಾದುದು. ವನ್ಯಜೀವಿಗಳಿಂದ ಮಾನವ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಆದ್ಯತೆ” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.


