ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಧ್ವಜಕ್ಕೆ ಅಗೌರವ ತೋರಿದ್ದಾರೆ ಎನ್ನುವ ಆರೋಪ ಎದುರಾಗಿದೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಹಿಟ್ಮ್ಯಾನ್ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದ್ದರು. ಇದೇ ವೇಳೆ ಅವರು ಧ್ವಜವನ್ನು ನೆಡಲು ಪ್ರಯತ್ನಿಸಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಧ್ವಜವನ್ನು ನೆಲಕ್ಕಿಡಲು ಪ್ರಯತ್ನಿಸಿದಾಗ ಧ್ವಜ ನೆಲಕ್ಕೆ ತಾಗಿರುವ ಫೋಟೊಗಳು ವೈರಲ್ ಆಗಿವೆ, ಇದು ತಪ್ಪು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ರೋಹಿತ್ ಅವರ ಪ್ರೊಫೈಲ್ ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜವು ನೆಲವನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು. ಇದು ಭಾರತಕ್ಕೆ ಮಾಡಿದ ಅವಮಾನ. ಏಕೆಂದರೆ 1971ರ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯಿದೆಯ ಪ್ರಕಾರ, ಧ್ವಜವನ್ನು ಉದ್ದೇಶಪೂರ್ವಕವಾಗಿ ನೆಲ ಅಥವಾ ನೀರಿನಲ್ಲಿ ಸ್ಪರ್ಶಿಸುವಂತೆ ಬಳಸುವಂತಿಲ್ಲ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಭಾರತದ ಧ್ವಜವು ನೆಲವನ್ನು ಮುಟ್ಟಬಾರದು ಎಂಬುದು ಸರಳ ಕಾನೂನು! ಇದು ಕೂಡ ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ತಿಳಿದಿಲ್ಲವೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ರೋಹಿತ್ ಶರ್ಮಾ ಎಚ್ಚರವಹಿಸಬೇಕೆಂದು ಕೆಲವರು ಕಿವಿಮಾತು ಹೇಳಿದ್ದಾರೆ.