ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ: ಕಾಪು ಮಾರಿಗುಡಿಗೆ ಕ್ರಿಕೆಟಿಗ ಸೂರ್ಯ ಕುಮಾರ್​ ಯಾದವ್​ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕಪ್ ಗೆಲುವಿನ ಹಾದಿ ಸುಗಮಗೊಳಿಸಿದ ಮಿಲ್ಲರ್ ಅವರ ಕ್ಯಾಚ್ ನ್ನು ಅದ್ಭುತವಾಗಿ ಹಿಡಿದು ಟೀಂ ಇಂಡಿಯಾಕ್ಕೆ ಜಯ ತಂದು ಕೊಟ್ಟ ಸೂರ್ಯ ಕುಮಾರ್​ ಯಾದವ್​ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಮಂಗಳವಾರ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾಪುದಮ್ಮ’ (ಕಾಪುವಿನ ತಾಯಿ) ಎಂದು ತುಳುವಿನಲ್ಲಿ ಹೇಳಿದರು.

ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆಯ ನನಗೆ ಬಂದಿಲ್ಲ. ಆಟದಲ್ಲಿ ಉತ್ತಮ ಪ್ರದರ್ಶನದ ಬಗ್ಗೆ ಗಮನ ಹರಿಸಿದ್ದೇನೆ. ದೇಶಕ್ಕೆ ಕಪ್ ತಂದುಕೊಡುವ ಸಂದರ್ಭವನ್ನು ದೇವರು ಸೃಷ್ಟಿ ಮಾಡಿದ್ದಾನೆ. ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ಕಾಪು ಮಾರಿಯಮ್ಮನ ದರ್ಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಪೂರೈಸಿದ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ ಎಂದರು.

ಈ ಸಂದರ್ಭ ದೇವಳದ ತಂತ್ರಿವರ್ಯರಾದ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಹಾಗೂ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯರವರು ಪ್ರಾರ್ಥಿಸಿ ಸೂರ್ಯಕುಮಾ‌ರ್ ದಂಪತಿಗೆ ಅನುಗ್ರಹ ಪ್ರಸಾದ ನೀಡಿದರು. ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಇದೇ ವೇಳೆ ಟೀಮ್ ಇಂಡಿಯಾ ಆಟಗಾರನಿಗೆ ಸೂಕ್ತ ಭದ್ರತೆ ಒದಗಿಸಲು ಮಾರಿಗುಡಿ ಸುತ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಕುಮಾರ್ ಜೊತೆ ಅಭಿಮಾನಿಗಳು ಅಟೋಗ್ರಾಫ್, ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರು, ದೇವಳದ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ.ರವಿಕಿರಣ್, ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಮನೋಹರ್ ಎಸ್. ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಗಂಗಾಧರ ಸುವರ್ಣ, ಅರುಣ್ ಶೆಟ್ಟಿ ಪಾದೂರು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!