ಹೊಸದಿಗಂತ ಮಡಿಕೇರಿ:
ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಮಾಡಿದ ಐವರು ಆರೋಪಿಗಳನ್ನು ಘಟನೆ ನಡೆದ 12 ಗಂಟೆಯೊಳಗಾಗಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದಕ್ಷಿಣ ಕೊಡಗಿನ ಕುಟ್ಟ ನಾಥಂಗಾಲ ಗ್ರಾಮದ ರವೀಂದ್ರ (24), ಅಕ್ಷಯ್ (27), ಕೇರಳ ರಾಜ್ಯದ ತೋಳ್ಪಟ್ಟಿಯ ನಡುಂದನ ಕಾಲೋನಿಯ ರಾಹುಲ್(21), ಮನು(25) ಹಾಗೂ ಸಂದೀಪ (27) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 3.15ರ ಸುಮಾರಿಗೆ ಕುಟ್ಟದದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಮೂವರು ಯುವಕರು ನಡೆದು ಹೋಗುತ್ತಿದ್ದಾಗ ಕುಟ್ಟ ಕಡೆಯಿಂದ ಬರುತ್ತಿದ್ದ ಮಾರುತಿ 800 ಕಾರನ್ನು ನಿಲ್ಲಿಸಿ ನಾಗರಹೊಳೆ ಕಡೆ ಬಿಡುವಂತೆ ಕೇಳಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ಈ ಐದು ಮಂದಿಯನ್ನು ಕಾರಿನಲ್ಲಿ ಸ್ವಲ್ಪ ದೂರ ಕರೆದೊಯ್ದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದು, ಅಪ್ರಾಪ್ತೆಯರ ಜೊತೆಯಲ್ಲಿ ಬಂದಿದ್ದ ಮೂವರು ಮತ್ತೊಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರರಾಜ್, ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಕುಟ್ಟ ವೃತ್ತ ನಿರೀಕ್ಷಕ ಸಿ.ಎ. ಮಂಜಪ್ಪ, ಕುಟ್ಟ ಠಾಣಾಧಿಕಾರಿ ಹೆಚ್.ಕೆ.ಮಹದೇವ , ಸಿಬ್ಬಂದಿಗಳು ಮತ್ತು ಅಪರಾಧ
ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ
ಹಾಕಿದ್ದಲ್ಲದೆ, ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿದ ಈ ತಂಡ ಪ್ರಕರಣ ದಾಖಲಾದ 12 ಗಂಟೆಯಲ್ಲಿ 5 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದೆ. ಪ್ರಕರಣದ ಆರೋಪಿಗಳನ್ನು 12 ಗಂಟೆಗಳಲ್ಲಿ ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.