ಮೃದುವಾಗಿ ಹೊಳೆಯುವ, ಆರೋಗ್ಯಕರ ಮತ್ತು ಸ್ವಾಭಾವಿಕ ಪಿಂಕ್ ಬಣ್ಣದ ತುಟಿಗಳು ಪ್ರತಿಯೊಬ್ಬರಿಗೂ ಇಷ್ಟ. ಆದರೆ ಹೆಚ್ಚಾಗಿ ಲಿಪ್‌ಸ್ಟಿಕ್ ಬಳಕೆ, ಬಿಸಿಲು, ಚಳಿಗಾಲದ ಒಣ ಹವಾಮಾನ, ನೀರು ಕಡಿಮೆ ಕುಡಿಯುವ ಅಭ್ಯಾಸ ಇವೆಲ್ಲವೂ ತುಟಿಗಳ ನೈಸರ್ಗಿಕ ಬಣ್ಣವನ್ನು ಮಸುಕಾಗಿಸುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಬಾಮ್‌ಗಳು ತಕ್ಷಣದ ಹೊಳಪು ನೀಡಬಹುದಾದರೂ, ಅವುಗಳಲ್ಲಿ ಇರುವ ರಾಸಾಯನಿಕಗಳು ದೀರ್ಘಾವಧಿಯಲ್ಲಿ ತುಟಿಗಳಿಗೆ ಒಳ್ಳೆಯದಲ್ಲ. ಅದಕ್ಕಾಗಿ ಮನೆಯಲ್ಲೇ ತಯಾರಿಸಬಹುದಾದ ನ್ಯಾಚುರಲ್ ಲಿಪ್ ಬಾಮ್ ಉತ್ತಮ ಆಯ್ಕೆಯಾಗಿದೆ.
ಈ ನ್ಯಾಚುರಲ್ ಲಿಪ್ ಬಾಮ್ ಮಾಡಲು ಹೆಚ್ಚು ಪದಾರ್ಥಗಳ ಅಗತ್ಯವಿಲ್ಲ. ತೆಂಗಿನ ಎಣ್ಣೆ, ಜೇನುತುಪ್ಪ, ಬೀಟ್‌ರೂಟ್ ರಸ ಮತ್ತು ಶಿಯಾ ಬಟರ್ ಇಷ್ಟು ಇದ್ದರೆ ಸಾಕು ನ್ಯಾಚುರಲ್ ಲಿಪ್ ಬಾಮ್ ರೆಡಿ ಆಗುತ್ತೆ.
ತೆಂಗಿನ ಎಣ್ಣೆ ತುಟಿಗಳಿಗೆ ಆಳವಾದ ತೇವಾಂಶ ನೀಡುತ್ತದೆ, ಶಿಯಾ ಬಟರ್ ತುಟಿಗಳನ್ನು ಮೃದುವಾಗಿಸಿ ಒಣತನವನ್ನು ತಡೆಯುತ್ತದೆ, ಜೇನುತುಪ್ಪ ತುಟಿಗಳ ಮೇಲೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಬೀಟ್‌ರೂಟ್ ರಸವನ್ನು ಸೇರಿಸುವುದರಿಂದ ತುಟಿಗಳಿಗೆ ನೈಸರ್ಗಿಕವಾಗಿ ಮೃದುವಾದ ಪಿಂಕ್ ಷೇಡ್ ಬರುತ್ತದೆ.
ಲಿಪ್ ಬಾಮ್ ಮಾಡೋದು ಹೇಗೆ ನೋಡೋಣ:
ಒಂದು ಚಮಚ ತೆಂಗಿನ ಎಣ್ಣೆ, ಅರ್ಧ ಚಮಚ ಶಿಯಾ ಬಟರ್ ಮತ್ತು ಕೆಲವು ಹನಿ ಬೀಟ್‌ರೂಟ್ ರಸ ಸೇರಿಸಿ ಡಬಲ್ ಬಾಯ್ಲರ್‌ನಲ್ಲಿ ಕರಗಿಸಿ. ತಣ್ಣಗಾದ ಬಳಿಕ ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ.
ನಿಯಮಿತವಾಗಿ ಈ ಲಿಪ್ ಬಾಮ್ ಬಳಸಿದರೆ ತುಟಿಗಳ ಕಪ್ಪುತನ ನಿಧಾನವಾಗಿ ಕಡಿಮೆಯಾಗುತ್ತದೆ. ತುಟಿಗಳು ಒಣಗದೆ ಸದಾ ತೇವಾಂಶದಿಂದ ಕೂಡಿರುತ್ತವೆ. ರಾತ್ರಿ ಮಲಗುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ಹಚ್ಚಿದರೆ ಬೆಳಿಗ್ಗೆ ತುಟಿಗಳು ಮೃದುವಾಗಿ ಕಾಣಿಸುತ್ತವೆ. ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕ ಇಲ್ಲದ ಕಾರಣ ಇದು ದಿನನಿತ್ಯ ಬಳಕೆಗೆ ಸುರಕ್ಷಿತವಾಗಿದೆ. ಸ್ವಲ್ಪ ಆರೈಕೆ ಮತ್ತು ನೈಸರ್ಗಿಕ ಪದಾರ್ಥಗಳ ಬಳಕೆಯಿಂದಲೇ ಬೇಬಿ ಪಿಂಕ್ ಲಿಪ್ಸ್ ಪಡೆಯಬಹುದು. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


