ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಅತಿಯಾಗಿ ಅಶ್ಲೀಲವಾಗಿವೆ ಎಂಬ ಟೀಕೆಗಳು ಕೇಳಿಬಂದಿದ್ದು, ಇದೇ ವಿಚಾರ ಇದೀಗ ಕಾನೂನು ಹಂತಕ್ಕೂ ತಲುಪಿದೆ.
ಮಹಿಳಾ ಆಯೋಗ ಮತ್ತು ಮಕ್ಕಳ ಆಯೋಗ ದೂರು ದಾಖಲಿಸಿಕೊಂಡ ಬಳಿಕ ಈಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ಗೂ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದು, ಟೀಸರ್‌ನಲ್ಲಿ ಅಶ್ಲೀಲತೆ ಹಾಗೂ ಸಾಮಾಜಿಕ ನೈತಿಕತೆಗೆ ವಿರುದ್ಧವಾದ ದೃಶ್ಯಗಳಿವೆ ಎಂದು ಆರೋಪಿಸಿದ್ದಾರೆ.
ಈ ದೃಶ್ಯಗಳು ಅಪ್ರಾಪ್ತ ವಯಸ್ಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದು, ‘ಟಾಕ್ಸಿಕ್’ ಚಿತ್ರಕ್ಕೆ ಪ್ರಮಾಣ ಪತ್ರ ನೀಡಬಾರದು ಹಾಗೂ ವಿವಾದಿತ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮೊದಲು ಕರ್ನಾಟಕ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಟೀಸರ್‌ನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ದೃಶ್ಯಗಳಿದ್ದು, ಯಾವುದೇ ವಯೋಮಾನದ ಎಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿರುವುದು ತಪ್ಪು ಎಂದು ಆರೋಪಿಸಲಾಗಿದೆ.
ಜನವರಿ 8ರಂದು ಬಿಡುಗಡೆಯಾದ ‘ಟಾಕ್ಸಿಕ್’ ಟೀಸರ್ ಈಗಾಗಲೇ 300 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


