ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಚುನಾವಣೆಯ ಫಲಿತಾಂಶ ಇಂದು ಹೊರ ಬೀಳುತ್ತಿದ್ದು, ಪ್ರತಿಪಕ್ಷಗಳ I.N.D.I.A ಒಕ್ಕೂಟ ಮೇಲುಗೈ ಸಾಧಿಸಿದೆ . ಜುಲೈ 10ರಂದು ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಸದ್ಯ I.N.D.I.A ಒಕ್ಕೂಟ ಕನಿಷ್ಠ 6 ಕಡೆ ಜಯ ಸಾಧಿಸಿದ್ದು, 4 ಕಡೆ ಮುನ್ನಡೆಯಲ್ಲಿದೆ. ಬಿಜೆಪಿ 1 ಸೀಟು ತನ್ನದಾಗಿಸಿಕೊಂಡಿದೆ.
ಪಶ್ಚಿಮ ಬಂಗಾಳದ ರಾಯ್‌ಗಂಜ್, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ, ಉತ್ತರಾಖಂಡದ ಬದ್ರಿನಾಥ್ ಮತ್ತು ಮಂಗ್ಲೌರ್, ಪಂಜಾಬ್‌ನ ಜಲಂಧರ್ ವೆಸ್ಟ್, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಘರ್, ಬಿಹಾರದ ರುಪೌಲಿ, ಮಧ್ಯಪ್ರದೇಶದ ಅಮರ್ವಾರಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇದೀಗ ಹೊರ ಬೀಳುತ್ತಿದೆ.
ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ (AAP) ಮೊಹಿಂದರ್ ಭಗತ್ 23,000 ಮತಗಳಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದ್ದರೆ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಾಂಗ್ರೆಸ್‌ನ ಕಮಲೇಶ್ ಠಾಕೂರ್ ಡೆಹ್ರಾದಲ್ಲಿ ಗೆಲುವು ಸಾಧಿಸಿದ್ದಾರೆ. ನಲಘರ್‌ನಲ್ಲಿ ಕಾಂಗ್ರೆಸ್, ಹಮೀರ್‌ಪುರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ.
ಉತ್ತರಾಖಂಡದ ಬದ್ರಿನಾಥ ಮತ್ತು ಮಂಗಳೌರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದ ಅಮರವಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧೀರನ್ ಶಾ ಇನ್ವತಿ ಮುನ್ನಡೆ ಸಾಧಿಸಿದ್ದಾರೆ. ಬಿಹಾರದ ರುಪೌಲಿಯಲ್ಲಿ ಜೆಡಿಯು ಅಭ್ಯರ್ಥಿ ಕಲಾಧರ್ ಪ್ರಸಾದ್ ಮಂಡಲ್ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ವಿಕ್ರಾವಂಡಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆಯ ಅಣ್ಣಿಯೂರ್ ಶಿವ ಮುಂದಿದ್ದಾರೆ.