ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಸದ್ಯಕ್ಕೆ 8000 ಕ್ಯುಸೆಕ್ ನೀರು ಬಿಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದೆ.
ಈ ವೇಳೆ CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಸಹಮತ ಸೂಚಿಸಿದ್ದು, ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು ಒತ್ತಾಯಿಸಿದರು. ಬಳಿಕ ಅಂತಿಮವಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ಧಾರ ಮಾಡಲಾಗಿದೆ.
ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. 31.24 ಜುಲೈ ತಿಂಗಳಲ್ಲಿ ಬಿಡಬೇಕು. ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.
ಲೀಗಲ್ ಟೀಮ್‌ನ ಮೋಹನ್ ಕಾತರಕಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಶೇ. 30 ಕಡಿಮೆ ಮಳೆಯಾಗಿದೆ.ಕಬಿನಿ ಜಲಾಶಯ ಶೇ.96 ಭರ್ತಿಯಾಗಿದ್ದು, ಹಾರಂಗಿಯಲ್ಲಿ ಶೇ.76, ಹೇಮಾವತಿ ಶೇ.56, ಕೆಆರ್‌ಎಸ್‌ನಲ್ಲಿ ಶೇ. 52 ನೀರು ಇದೆ. ಒಟ್ಟು ಶೇ. 63 ಮಾತ್ರ ನೀರು ಸಂಗ್ರಹ ಆಗಿದೆ ಎಂದು ತಿಳಿಸಿದರು.
ವಿಪಕ್ಷ ಹಾಗೂ ನಮ್ಮ ಶಾಸಕರು, ಸಚಿವರ ಅಭಿಪ್ರಾಯ ಒಂದೇ ಆಗಿದೆ. ನಿತ್ಯ 1 ಟಿಎಂಸಿ ಬದಲಿಗೆ 8 ಸಾವಿರ ಕ್ಯುಸೆಕ್ ನೀರು ಬಿಡೋಣ. ಒಂದು ವೇಳೆ ಮಳೆ ಬಾರದಿದ್ದರೆ ಕಡಿಮೆ ಹರಿಸೋಣ, ಇಲ್ಲದಿದ್ದರೆ CWMAಗೆ ಮೇಲ್ಮನವಿ ಸಲ್ಲಿಸೋಣ ಎಂಬ ಎಂಬ ಸಲಹೆ ಬಂದಿದೆ. 24 ಗಂಟೆಯಲ್ಲಿ 11,500 ಕ್ಯುಸೆಕ್ ನೀರು ಹರಿದರೆ 1 TMC ಆಗಲಿದೆ. ಅಷ್ಟು ನೀರು ಇಲ್ಲದಿರುವ ಹಿನ್ನೆಲೆಯಲ್ಲಿ 8 ಸಾವಿರ ಕ್ಯುಸೆಕ್ ನೀರು ಬಿಡೋಣ. ಮಳೆ ಜಾಸ್ತಿ ಬಂದರೆ ಜಾಸ್ತಿ ಬಿಡೋಣ ಅಂತ ನಿರ್ಧಾರ ಮಾಡಿದ್ದೇವೆ ಎಂದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ವಕೀಲ ಮೋಹನ್ ಕಾತರಗಿ, ಮಾಜಿ ಸಿಎಂ ಸದಾನಂದಗೌಡ, ಎಂಎಲ್‌ಸಿ ರವಿ ಕುಮಾರ್, ಸುರೇಶ್ ಬಾಬು, ನಾಗರಾಜ್ ಯಾದವ್, ಎಜಿ ಶಶಿಕಿರಣ್ ಶೆಟ್ಟಿ, ಮಂಜೇಗೌಡ, ಜಿಟಿ ದೇವೇಗೌಡ, ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಯದವೀರ್ ಒಡೆಯರ್, ದರ್ಶನ ಪುಟ್ಟಣ್ಣಯ್ಯ ಹಾಗೂ ಜಲ ಸಂಪನ್ಮೂಲಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.