ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ, ಮಕ್ಕಳನ್ನು ಹೀಗೆ ಕಾಪಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾಗುತ್ತಿದ್ದು,  ಶಿಕ್ಷಣ ಇಲಾಖೆಯು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ರೋಗಗಳು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದೆ.

ಮಕ್ಕಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪತ್ತೆಯಾಗುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಶಾಲಾ ಆವರಣ ಮತ್ತು ಸಮೀಪದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸಲು ಮತ್ತು ಒದ್ದೆಯಾದ ತ್ಯಾಜ್ಯವನ್ನು ತಕ್ಷಣವೇ ವಿಲೇವಾರಿ ಮಾಡಲು ಇಲಾಖೆಯು ಶಾಲೆಗಳಿಗೆ ಸೂಚನೆ ನೀಡಿದೆ.

ಏನೆಲ್ಲಾ ಹೇಳಿದೆ?

ಶಿಕ್ಷಣ ಸಂಸ್ಥೆಗಳು ಗ್ರಾಮ ಪಂಚಾಯತಿ ಮತ್ತು ನಾಗರಿಕ ಸಂಸ್ಥೆಗಳ ಜೊತೆಗೂಡಿ ಡೆಂಗ್ಯೂ ವಿರೋಧಿ ಕ್ರಮಗಳಿಗಾಗಿ ಔಷಧಿ ಸಿಂಪಡಣೆ ಮತ್ತು ಫಾಗಿಂಗ್ ಕಾರ್ಯಾಚರಣೆಗಳನ್ನು ನಡೆಸಬೇಕು.

ಶಾಲೆಗಳಲ್ಲಿನ ನೀರಿನ ಸಂಗ್ರಹಕಗಳನ್ನು ವಾರಕ್ಕೊಮ್ಮೆ ಉಜ್ಜಿ, ತೊಳೆದು, ಖಾಲಿ ಮಾಡಿ. ಒಣಗಿಸಿ ಭರ್ತಿ ಮಾಡಿದ ನಂತರ ಭದ್ರವಾದ ಮುಚ್ಚಳದಿಂದ ಮುಚ್ಚಬೇಕು.

ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲುವ ಕೆಲಸ ಮಾಡಬೇಕು. ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಝಿಕಾ ವೈರಸ್‌ನಂತಹ ರೋಗಗಳ ಲಕ್ಷಣಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು.

ಶಾಲಾ ವಿದ್ಯಾರ್ಥಿಗಳಲ್ಲಿ ಜ್ವರದ ಪ್ರಕರಣಗಳು ವರದಿಯಾದರೆ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ಹೊರಾಂಗಣದಲ್ಲಿದ್ದಾಗ ಉದ್ದ ತೋಳಿನ ಬಟ್ಟೆಗಳನ್ನು ಧರಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಬೇಕು.

ನೀರಿನಂಶ ಹೆಚ್ಚಿರುವ ಕಲ್ಲಂಗಡಿ ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ಸೇವಿಸಬೇಕು. ಮಕ್ಕಳು ಮತ್ತು ಯುವಕರು ಸಮತೋಲಿತ ಆಹಾರ ಕ್ರಮವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!