ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕ್ ಎ ಇನ್ಸಾಫ್(PTI) ಪಕ್ಷವನ್ನು ನಿಷೇಧಿಸಲು ಪಾಕಿಸ್ತಾನದಲ್ಲಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತ್ತಾವುಲ್ಲಾ ತರಾತ್ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರ ಪಿಟಿಐ ಪಕ್ಷ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ. ಪಿಟಿಐ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಹಿಸಲಾಗಿದೆ ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷವು ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ 20 ಕ್ಕೂ ಹೆಚ್ಚು ಸ್ಥಾನಗಳಿಗೆ ಅರ್ಹವಾಗಿದೆ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ಆದೇಶದ ನಂತರ ಪಿಟಿಐ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ದಾರಿ ಮಾಡಿಕೊಟ್ಟಿದೆ. ಇದಾದ ಕೆಲವು ದಿನಗಳ ನಂತರ ಪಾಕಿಸ್ತಾನ ಸರ್ಕಾರ ಈ ಘೋಷಣೆಯನ್ನು ಮಾಡಿದೆ.
ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ವಿದೇಶಿ ಮೂಲಗಳಿಂದ ಅಕ್ರಮವಾಗಿ ಹಣ ಸ್ವೀಕರಿಸಿರುವ ಬಗ್ಗೆ ಪುರಾವೆಗಳಿವೆ. ಅದೂ ಅಲ್ಲದೇ ಆ ಹಣವನ್ನು ಬಳಸಿಕೊಂಡು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಬಯಲಾಗಿದೆ. ವಿದೇಶಿ ನಿಧಿ ಪ್ರಕರಣ, ಮೇ 9 ರ ಗಲಭೆಗಳು, ಸೈಫರ್ ಎಪಿಸೋಡ್ ಮತ್ತು ಯುಎಸ್‌ನಲ್ಲಿ ಅಂಗೀಕರಿಸಿದ ನಿರ್ಣಯದ ದೃಷ್ಟಿಯಿಂದ, ಪಿಟಿಐ ಅನ್ನು ನಿಷೇಧಿಸಲು ಸಾಕಷ್ಟು ವಿಶ್ವಾಸಾರ್ಹ ಪುರಾವೆಗಳಿವೆ. ಹೀಗಾಗಿ ಅದನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್, 71, ಪಾಕಿಸ್ತಾನದ ಪ್ರಬಲ ಮಿಲಿಟರಿಯೊಂದಿಗಿನ ಅಸಮಾಧಾನದ ನಂತರ ಏಪ್ರಿಲ್ 2022 ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ನಂತರ ಅವರ ವಿರುದ್ಧ ಅನೇಕ ಪ್ರಕರಣಗಳಲ್ಲಿ ಅರೆಸ್ಟ್ ಮಾಡಲಾಗಿತ್ತು. ಸದ್ಯ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಯೊಂದನ್ನು ಅಮೆರಿಕಕ್ಕೆ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಾದ ಬಳಿಕವೇ ಮತ್ತೊಂದು ನ್ಯಾಯಾಲಯವು 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ತೋಷಖಾನಾ (ಖಜಾನೆಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ) ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಈಗ ಮತ್ತೊಂದು ನ್ಯಾಯಾಲಯವು ದಂಪತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.