ಚಂದದ ಚಿತ್ರ ಬರೆಯುವವರಿಗೆ ಇಡೀ ಲೋಕವೇ ಕ್ಯಾನ್ವಾಸ್ ಅಲ್ವಾ? ಪುಟಾಣಿ ಕಂದಮ್ಮಗಳಿರುವ ಯಾವುದೇ ಮನೆಗೆ ವಿಸಿಟ್ ಮಾಡಿ ನೋಡಿ..
ಗೋಡೆ ಮೇಲೆ ಅಂದಚಂದದ ಚಿತ್ತಾರ, ಇನ್ನೂ ಪುಟ್ಟ ಮಕ್ಕಳಾದ್ರೆ ಎಲ್ಲಾ ಕಡೆ ಗೀಚಿದ್ದು, ಅವೊಂಥರಾ ಮೋಡಗಳಂತೆ, ಹೇಗೇಗೋ ಕಾಣುತ್ತವೆ, ಆದರೆ ನಿಮ್ಮ ಇಮ್ಯಾಜಿನೇಷನ್ ಬಳಸಿ ನೋಡಿ ಅದೂ ಅದ್ಭುತವಾಗಿಯೇ ಕಾಣುತ್ತದೆ.
ಮಕ್ಕಳು ಕೈಯಲ್ಲಿ ಸ್ಕೆಚ್‌ಪೆನ್, ಪೆನ್ಸಿಲ್ ಅಥವಾ ಕಲರ್ ಪೆನ್ ಹಿಡಿದುಕೊಂಡು ಗೋಡೆ ಕಡೆ ಮುಖ ಮಾಡಿ ಮಗ್ನವಾಗಿ ಏನೋ ಗೀಚುತ್ತಿದ್ದರೆ, ಹೃದಯಕ್ಕೆ ತಾಗುವಷ್ಟು ಜೋರಾಗಿ ʼಏಯ್ʼ ಎಂದು ಕೂಗಬೇಡಿ. ಇದರಿಂದ ಮಕ್ಕಳು ಬೆಚ್ಚಿ ಬೀಳುತ್ತಾರೆ. ಜತೆಗೆ ಅವರ ಮೆದುಳಿನಲ್ಲಿ ಆಗುತ್ತಿರುವ ಕ್ರಿಯೆ ನಿಂತು ಹೋಗುತ್ತದೆ.
ಮೊನ್ನೆಯಷ್ಟೇ ಒಂದು ವಿಡಿಯೋ ವೈರಲ್ ಆಗಿತ್ತು. ಪುಟಾಣಿ ಕಂದಮ್ಮಗಳನ್ನು ಹಾನಿಕಾರಕವಲ್ಲದ ಹಾವುಗಳ ಜತೆ ಬಿಡಲಾಗಿತ್ತು. ಪೋಷಕರಿಗೆ ಒಂದೂ ಮಾತನಾಡದಂತೆ ಹೇಳಲಾಗಿತ್ತು. ಪೋಷಕರು ಮಕ್ಕಳನ್ನು ನೋಡುತ್ತಾ ಇದ್ದರು. ಮಕ್ಕಳ ಕಿಲಕಿಲ ಬಿಟ್ಟು ಬೇರೆ ಸದ್ದಿಲ್ಲ. ಮಕ್ಕಳು ಅಪ್ಪ ಅಮ್ಮನನ್ನು ನೋಡುತ್ತಾ, ಯಾವುದೋ ಹೊಸ ಆಟಸಾಮಾನು ಸಿಕ್ಕಿದೆ ಎನ್ನುವ ಹಾಗೆ ಖುಷಿ ಪಡುತ್ತಾರೆ. ಅವರ್ಯಾಕೆ ಹಾವನ್ನು ನೋಡಿ ಭಯಬೀಳೋದಿಲ್ಲ. ಅವರಿಗೆ ಯಾವ ಭಯವೂ ಇಲ್ಲ, ಅವರು ಹಾವನ್ನು ನೋಡಿ ತಮ್ಮ ಭಯವನ್ನು ನಿರ್ಧಾರ ಮಾಡೋದಿಲ್ಲ. ಬಟ್ ಪೋಷಕರ ಎಕ್ಸ್‌ಪ್ರೆಶನ್ ನೋಡಿ ಭಯವನ್ನು ಡಿಸೈಡ್ ಮಾಡ್ತಾರೆ. ಅಪ್ಪ ಅಮ್ಮ ಖುಷಿಪಟ್ಟರೆ, ಅದು ಖುಷಿ, ಅಪ್ಪ ಅಮ್ಮ ಸಿಟ್ಟಾದರೆ ಸಿಟ್ಟು, ಅವರು ಭಯಪಟ್ಟರೆ ಭಯ. ನಿಮ್ಮ ಎಕ್ಸ್‌ಪ್ರೆಶನ್ ಮೇಲೆ ಅವರು ಜೀವನದಲ್ಲಿ ಯಾವ ವಿಷಯಕ್ಕೆ ಭಯ ಪಡ್ತಾರೆ ಅನ್ನೋದು ಡಿಸೈಡ್ ಆಗುತ್ತದೆ. ತಮ್ಮ ಕ್ರಿಯೇಟಿವಿಟಿ ಎಕ್ಸ್‌ಪ್ರೆಸ್ ಮಾಡೋದಕ್ಕೂ ಭಯ ಪಡುವಂತೆ ಮಾಡಬೇಡಿ.
ಮಕ್ಕಳು ಗೋಡೆ ಮೇಲೆ ಗೀಚುವಾಗ ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ, ಅವರ ಇಮ್ಯಾಜಿನೇಷನ್ ಪುಸ್ತಕಕ್ಕೆ ಸೀಮಿತ ಅಲ್ಲ. ಗೋಡೆ ಹಾಳಾದರೆ ಹಾಳಾಗಲಿ ಬಿಡಿ, ಯಾರು ಏನಾದರೂ ಅಂದುಕೊಳ್ತಾರೆ ಅನ್ನೋದಕ್ಕಿಂತ ಮಕ್ಕಳ ಖುಷಿ ಮುಖ್ಯ ಅಲ್ವಾ?