ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡೋದಕ್ಕೆ ಎಐ ಕ್ಯಾಮೆರಾ ಬಳಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡೋದಕ್ಕೆ ಎಐ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲಾಗಿದೆ.

ಶಾಸಕರು ಸದನವನ್ನು ಪ್ರವೇಶಿಸುವ ಎಲ್ಲಾ ಮೂರು ಬಾಗಿಲುಗಳಲ್ಲಿ ಕೃತಕ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಕ್ಯಾಮರಾಗಳು ಮತ್ತು ಸದನದ ಹೊರಗೆ ಅಳವಡಿಸಲಾಗಿರುವ ಇನ್ನೊಂದು ಕ್ಯಾಮರಾವು ಶಾಸಕರು ವಿಧಾನಸೌಧ ಪ್ರವೇಶಿಸುವಾಗ ಅವರ ಮುಖಗಳನ್ನು ರೆಕಾರ್ಡ್ ಮಾಡುತ್ತದೆ ಮತ್ತು ಶಾಸಕರು ಸದನದೊಳಗೆ ಎಷ್ಟು ನಿಮಿಷ ಅಥವಾ ಗಂಟೆಗಳ ಕಾಲ ಇದ್ದರು ಎಂಬ ರಿಯಲ್ ಟೈಮ್ ದತ್ತಾಂಶವನ್ನು ನೀಡುತ್ತದೆ.

ಸದನದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವ ಶಾಸಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಈ ಹಿಂದೆ ಘೋಷಿಸಿದ್ದರು. ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನದಂದು, ಈ ಕ್ಯಾಮರಾಗಳ ಮುಂದೆ ಫೇಸ್​​ ರೆಕಗ್ನಿಷನ್ ತಂತ್ರಜ್ಞಾನದಡಿ ಹಾಜರಾತಿ ದಾಖಲು ಮಾಡಿಕೊಳ್ಳಲು ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸದನದ ಒಳಗೆ ಮತ್ತು ಹೊರಗೆ ಇರುವ ಕ್ಯಾಮರಾಗಳಲ್ಲಿ ಶಾಸಕರು ಎಷ್ಟು ಬಾರಿ ಸದನಕ್ಕೆ ಪ್ರವೇಶಿಸಿದರು ಮತ್ತು ನಿರ್ಗಮಿಸಿದರು ಮತ್ತು ಎಷ್ಟು ಗಂಟೆ ಒಳಗೆ ಕುಳಿತರು ಎಂಬುದೂ ದಾಖಲಾಗುತ್ತದೆ. ಇಷ್ಟೇ ಅಲ್ಲದೆ, ವಿಧಾನಸೌಧದ ಪಶ್ಚಿಮ ಭಾಗದ ಪ್ರವೇಶದ್ವಾರದಲ್ಲಿ ಅನೇಕ ಕಾಮಗಾರಿಗಳನ್ನು ಮಾಡಿಸಲಾಗಿದ್ದು, ರೋಸ್‌ವುಡ್‌ನಿಂದ ಕೆತ್ತಿದ ಹೊಸ ಮುಖ್ಯ ಬಾಗಿಲನ್ನು ಸ್ಥಾಪಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!