ಹೊಸದಿಗಂತ ಅಂಕೋಲಾ:
ಸತತವಾಗಿ ಸುರಿಯುತ್ತಿರುವ ರಣಭಿಕರ ಮಳೆಗೆ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಆಗಿರುವ ಅವಘಡದಲ್ಲಿ ಸಾವಿನ ಸಂಖ್ಯೆ 15 ಕ್ಕೆ ಏರುವ ಸಾಧ್ಯತೆ ಕಂಡು ಬಂದಿದೆ.
ಸೋಮವಾರ ಬೆಳಿಗಿನ ಜಾವದಿಂದ ಕುಸಿಯುತ್ತಿರುವ ಧರೆ ಇನ್ನೂ ನಿಂತಿಲ್ಲ. ಹೀಗಾಗಿ ಜಿಲ್ಲಾಡಳಿತ 1.ಕಿಮಿ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಭಂದ ವಿಧಿಸಿದೆ. ಅವ್ಯಾಹತ ಮಳೆಯಿಂದಾಗಿ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ.ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ.
ಗುಡ್ಡದ ಮಣ್ಣಿನ ಜೊತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಗ್ಯಾಸ್ ಟ್ಯಾಂಕರ್ ಗಳು ಪಕ್ಕದ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದರಿಂದ ಗ್ಯಾಸ್ ಸೋರಿಕೆ ಆಗುವ ಭೀತಿ ಕಂಡು ಬಂದಿದೆ.ಹೀಗಾಗಿ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಅಡಳಿತಾಧಿಕಾರಿಗಳು,ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ಸಹಾಯಕ ಆಯುಕ್ತರು ಕೂಡಲೇ ಮುನ್ನೆಚರಿಕೆ ಕ್ರಮವಾಗಿ ನದಿ ದಡದಲ್ಲಿರುವ ಎಲ್ಲಾ ಮನೆಗಳಲ್ಲಿರುವ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಗಳಾದ ಕಾಳಜಿ ಕೇಂದ್ರದಲ್ಲಿ ಸ್ಥಳಾಂತರಿಸಿ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ.
ಅಂಕೋಲಾ ಪೊಲೀಸರು, ಅಗ್ನಿಶಾಮಕ, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳು ಮಣ್ಣು ತೆರುವು ಕಾರ್ಯಾಚರಣೆ ಮುಂದುವರೆಸಿದ್ದಾರೆ.