ಹೊಸದಿಗಂತ ಅಂಕೋಲಾ :
ಶಿರೂರು ಬಳಿ ಗುಡ್ಡ ಕುಸಿತದಿಂದ ಸಂಭವಿಸಿರುವ ಅವಘಡದ ಸ್ಥಳದಲ್ಲಿ ಅಡುಗೆ ಅನಿಲ ಸಾಗಿಸುವ ಟ್ಯಾಂಕರ್ ನದಿಗೆ ಬಿದ್ದು ಅನಿಲ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ದುರ್ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗಂಗಾವಳಿ ನದಿಯಲ್ಲಿ ಟ್ಯಾಂಕರ್ ಬಿದ್ದುದ್ದರಿಂದ ಅನಿಲ ಸೋರಿಕೆಯಾಗಬಹುದಾದ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟುವ ಬಗ್ಗೆ ಎನ್.ಡಿ.ಆರ್.ಎಫ್, ನೇವಿ ಹಾಗೂ ಅಗ್ನಿಶಾಮಕ ತಂಡಗಳು ಜಂಟಿಯಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಐಆರ್ ಬಿ ಜೊತೆಗೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಗೆ ತೊಂದರೆಯಾಗದಂತೆ ಅನಿಲ ಸೋರಿಕೆಯಾದಲ್ಲಿ ಸಂಭವಿಸಬಹುದಾದ ದುರ್ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಈ ಪ್ರದೇಶದಲ್ಲಿ ಸಾರ್ವಜನಿಕರ ಚಲನ ವಲನಗಳನ್ನು ನಿರ್ಬಂಧಿಸಲಾಗಿದೆ.
ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಗಂಗಾವಳಿ ನದಿ ಪಾತ್ರದ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯ ಸಾರ್ವಜನಿಕರು ಟ್ಯಾಂಕರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುವುದನ್ನು ಅಥವಾ ಇನ್ನಾವುದೇ ವಾಹನ ಬಳಸಿ ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.