ಹೊಸದಿಗಂತ ವರದಿ,ಕಲಬುರಗಿ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದವರಾದ ರೈತ ಸ್ನೇಹಿ ,ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಾಜಿ ಕುಲಪತಿ ಡಾ.ಎಸ್.ಎ.ಪಾಟೀಲ್ ಅವರಿಗೆ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಬಿರಾಳ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ಪಾಲ್ಗೊಂಡು ಹಾಗೂ ನುಡಿ ನಮನ ಸಲ್ಲಿಸಿದರು.
ಇದಕ್ಕೂ ಮೊದಲು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಮನವನ್ನು ಗೆದಿದ್ದ ಇವರು ಕುಲಪತಿಯ ಅವಧಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಅತ್ಯುನ್ನತ ವಿಶ್ವವಿದ್ಯಾಲಯವೆಂದು ಬೆಳೆಸಿ ಧಾರವಾಡದಲ್ಲಿ ಅನೇಕ ನೂತನ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ದೇಶದಲ್ಲಿಯೇ ಪ್ರಥಮ ಬಾರಿಗೆ ಬೀಜ ಗ್ರಾಮ ಯೋಜನೆಯನ್ನು ಹುಟ್ಟುಹಾಕಿದ್ದರು ಎಂದರು.
ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವಲ್ಲಿ ನಿರಂತರ ಶ್ರಮಿಸಿದ ಒಬ್ಬ ಧೀಮಂತ ಕೃಷಿ ವಿಜ್ಞಾನಿಯನ್ನು ಕಳೆದುಕೊಂಡಿದ್ದು ಕೃಷಿ ಕ್ಷೇತ್ರವು ಬಳಲಿದಂತಾಗಿದೆ. ಕೃಷಿ ವಿಜ್ಞಾನಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬಿ.ಆರ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮುಖಂಡರಾದ ನೀಲಕಂಠರಾವ ಮೂಲೆಗೆ, ದೊಡ್ಡಪ್ಪಗೌಡ ಪಾಟೀಲ್ ಸೇರಿದಂತೆ ಸೇರಿದಂತೆ ಹಲವು ಪಕ್ಷದ ಹಿರಿಯ ಮುಖಂಡರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.