ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರಗೆ ಮತ್ತೆ 5 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇಂದು ನಾಗೇಂದ್ರ ಅವರ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರ್ ಪಡಿಸಿತ್ತು. ತನಿಖೆ ಇನ್ನಷ್ಟು ನಡೆಯಬೇಕಿರುವ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಕೇಳಿತ್ತು. ಇವತ್ತು ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.
ಮಾಚಿ ಸಚಿವ ನಾಗೇಂದ್ರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು. ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಚಿಂಗ್ ಮುಗಿದಿದೆ. ಆರೋಪಿಯ ವಿಚಾರಣೆಯೂ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇಡಿ ಅಧಿಕಾರಿಗಳು ಪೊಲೀಸರಲ್ಲ. ಅವರನ್ನು ಕಸ್ಟಡಿಗೆ ಪಡೆದ ಉದ್ದೇಶ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡೋದೇನಿದೆ? ಎಂದು ಪ್ರಶ್ನಿಸಿದರು.
ಇಡಿ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಾದರು. ದಾಳಿ ವೇಳೆ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಕಂತೆ ಕಂತೆ ಹಣ ಪತ್ತೆಯಾಗಿದೆ. ಆರೋಪಿ ಎಲ್ಲವೂ ಗೊತ್ತಿದ್ದು ಅಪರಾಧ ಕೃತ್ಯ ಎಸಗಿದ್ದಾರೆ. ಆರೋಪಿ ತನ್ನ ಸಹಚರರಿಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆ ಮೇರೆಗೆ ನಿಗಮದಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ. ಈಗಾಗಲೇ ಕೆಲವು ಆರೋಪಿಗಳ ಮೊಬೈಲ್ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿ ನಾಗೇಂದ್ರ ಪತ್ನಿಯನ್ನು ವಿಚಾರಣೆ ನಡೆಸಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇನ್ನಷ್ಟು ಮಾಹಿತಿ ಬೇಕಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಎಸ್ಪಿಪಿ ಮನವಿ ಮಾಡಿದರು. ಇಲ್ಲಿಯವರೆಗೆ ನಡೆದ ತನಿಖಾ ಮಾಹಿತಿ ದಾಖಲೆಗಳನ್ನೊಳಗೊಂಡ ಕಡತಗಳನ್ನು ಇಡಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಸಿದರು.
ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು.